

ಬೆಂಗಳೂರು: ‘ಚಿತ್ರ ಬಿಡುಗಡೆಯಾದ ದಿನ ಕಲೆಕ್ಷನ್ ಕಡಿಮೆ ಇರುವ ವಿಚಾರ ಕೇಳಿ ನನ್ನ ಮತ್ತು ಸುನಿ ಕಾಂಬಿನೇಷನ್, ಈ ಬಾರಿ ಅಂದುಕೊಂಡಂತೆ ಬರಲಿಲ್ಲವೇನೋ ಎಂಬ ಬೇಸರವಿತ್ತು. ಕ್ರಮೇಣ ಕಲೆಕ್ಷನ್ ಸುಧಾರಿಸಿತು’ ಎಂದು ಖುಷಿಯಾದರು ಗಣೇಶ್.
ಅವರ ಖುಷಿಗೆ ಕಾಣರವಾಗಿರುವುದು ‘ಸಖತ್’ ಚಿತ್ರ. ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣತ್ತಿದ್ದು, 25ನೇ ದಿನದತ್ತ ಮುನ್ನುಗುತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡದವರೆಲ್ಲ ಒಟ್ಟಿಗೆ ಸೇರಿದ್ದರು.
‘ಚಿತ್ರ ಬಿಡುಗಡೆಗೂ ಮುನ್ನ ಕರೊನಾ ಭಯ ಇದ್ದೇ ಇತ್ತು. ಬಿಡುಗಡೆಯಾದ ದಿನ ಕಲೆಕ್ಷನ್ ಬೇರೆ ಕಡಿಮೆ ಇತ್ತು. ಕ್ರಮೇಣ ಎಲ್ಲ ಸವಾಲುಗಳ ಮಧ್ಯೆ ಎರಡು ಮತ್ತು ಮೂರನೆಯ ವಾರ ಚಿತ್ರ ಹೌಸ್ಫುಲ್ ಆಗಿದೆ. ಹಾಗಾಗಿ, ಈ ವಾರ ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ಹೆಮ್ಮೆಯಿಂದ ಬಂದಿದ್ದೇವೆ’ ಎನ್ನುತ್ತಾರೆ ಗಣೇಶ್.
ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿ: ಇನ್ನು, ಪರಭಾಷೆಯ ಚಿತ್ರಗಳಿಂದ ಚಿತ್ರಮಂದಿರಕ್ಕೇನಾದರೂ ಸಮಸ್ಯೆ ಎದುರಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪರಭಾಷೆಗಳ ಪೈಪೋಟಿ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದ ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಚಿತ್ರರಂಗವಷ್ಟೇ ಅಲ್ಲ, ಸರ್ಕಾರ ಸಹ ಸಹಕಾರ ಕೊಡಬೇಕಾಗುತ್ತದೆ. ಯಾವುದೇ ಸಿನಿಮಾ ಬಂದರೂ ಮೊದಲು ಕನ್ನಡದಲ್ಲಿ ಬರಲಿ ಎಂಬುದು ನನ್ನ ಆಸೆ. ಮೊದಲು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿ, ಆ ನಂತರ ಮೂಲ ಭಾಷೆಯ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ನನ್ನ ಬೇಡಿಕೆ. ಈ ಕುರಿತು ಒಂದು ಕಾನೂನು ತರಬೇಕು’ ಎನ್ನುತ್ತಾರೆ ಗಣೇಶ್. ಗಣೇಶ್ ಜತೆಯಲ್ಲಿ ನಿರ್ದೇಶಕ ಸುನಿ, ನಾಯಕಿ ನಿಶ್ವಿಕಾ ನಾಯ್ಡು, ಕಾರ್ಯಕಾರಿ ನಿರ್ವಪಕ ಸುಪ್ರೀತ್ ಮುಂತಾದವರಿದ್ದು, ಎಲ್ಲರೂ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು.