

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಸೋಷಿಯಲ್ ಮೀಡಿಯಾ ಪೂರ್ತಿ ಸಂತಾಪದ ಮೆಸೇಜ್ಗಳೇ ತುಂಬಿವೆ. ಇನ್ನು ಕೆಲವರು, ಸುಶಾಂತ್ ಪರ ಮಾತನಾಡುವ ಭರದಲ್ಲಿ, ಚಿತ್ರರಂಗವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಮಾತನಾಡದ ಸೈಫ್ ಅಲಿ ಖಾನ್ ಈ ಬಗ್ಗೆ ಸಿಟ್ಟಾಗಿದ್ದು, ಸುಶಾಂತ್ ಸಾವಿನಿಂದ ಮೈಲೇಜ್ ತೆಗೋಬೇಡಿ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸುಶಾಂತ್ ಸಾವು ನಿಜಕ್ಕೂ ಎಲ್ಲರಿಗೂ ಆಘಾತ ತಂದಿದೆ. ಇಷ್ಟು ದಿನ ಆದರೂ, ಆ ಬಗ್ಗೆ ಏನು ಹೇಳಬೇಕು ಅಂತಲೇ ತೋಚುತ್ತಿಲ್ಲ. ಆದರೆ, ಕೆಲವರು ಅಷ್ಟರಲ್ಲೇ ಏನೇನೋ ಮಾತಾಡಿದ್ದಾರೆ. ಸುಶಾಂತ್ ದುರಂತ ಸಾವಿನಿಂದ ಮೈಲೇಜ್ ತೆಗೆದುಕೊಳ್ಳುವುದನ್ನು ಮೊದಲು ನಿಲ್ಲಿಸಿ. ಸುಶಾಂತ್ ಬಗ್ಗೆ ಎಷ್ಟೊಂದು ಜನರಿಗೆ ನಿಜಕ್ಕೂ ಅಷ್ಟೊಂದು ಪ್ರೀತಿ, ಮಮತೆ ಇತ್ತೋ ಅಥವಾ ಇಷ್ಟೆಲ್ಲಾ ಆಗುತ್ತಿರುವಾಗ ನನಗೂ ಒಂದಿಷ್ಟು ಪ್ರಚಾರ ಸಿಗಲಿ ಎಂದು ಮಾತಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಸೈಫ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಇನ್ನಷ್ಟು ಮಾತಾಡಿರುವ ಅವರು. ಸುಶಾಂತ್ ಬಗ್ಗೆ ಗೌರವವಿದ್ದರೆ, ಅವರ ಸಾವಿನ ಬಗ್ಗೆ ಬೇಸರವಿದ್ದರೆ, ಒಂದೆರೆಡು ದಿನ ಮೌನವಾಗಿರಿ. ಅದು ಬಿಟ್ಟು, ಏನೇನೋ ಮಾತನಾಡುವುದು ತಪ್ಪು. ಅದರಲ್ಲೂ ಯಾರ ಬಗ್ಗೆಯೂ ಕೇರ್ ಮಾಡದ ಜನ ಸಹ, ಸುಶಾಂತ್ ಸಾವಿನ ಬಗ್ಗೆ ಬೇಸರ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ. ಇದ್ದಾಗ ಕೇರ್ ಮಾಡದಿದ್ದವರೆಲ್ಲಾ, ಈಗ ಅಷ್ಟೆಲ್ಲಾ ನಾಟಕ ಮಾಡುತ್ತಿರುವುದು ಹಿಪಾಕ್ರಸಿ ಅಲ್ಲದೆ ಮತ್ತಿನ್ನೇನು. ಇದು ಸತ್ತವರಿಗೆ ಮಾಡುತ್ತಿರುವ ಅವಮಾನ. ಈ ಸಮಯದಲ್ಲಿ ನಾವು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸೈಫ್ ಹೇಳಿದ್ದಾರೆ.
ಬರೀ ಇದೊಂದು ಪ್ರಕರಣವಷ್ಟೇ ಅಲ್ಲ, ಕಾಲ ಸಾಕಷ್ಟು ಬದಲಾಗಿದೆ ಎಂದು ಹೇಳಿರುವ ಸೈಫ್, ನಾವು ಇವತ್ತು ಎಂಥಾ ಕಾಲಘಟ್ಟದಲ್ಲಿದ್ದೇವೆ ಎಂದರೆ, ಟ್ವಿಟರ್ನಲ್ಲಿ ಯಾರದೋ ಬಗ್ಗೆ ಹೊಗಳಿ ಹೊಗಳಿ ಬರೆಯುತ್ತೇವೆ. ಅವರು ಎದುರು ಸಿಕ್ಕಾಗ ಅವರನ್ನು ಮಾತನಾಡಿಸುವುದಕ್ಕೂ ಹೋಗುವುದಿಲ್ಲ. ಇನ್ನು ಹುಟ್ಟುಹಬ್ಬಕ್ಕೆ ಮೆಸೇಜ್ ಮಾಡಿ ಹಾರೈಸುತ್ತಾರೆ, ಕನಿಷ್ಠ ಫೋನ್ ಸಹ ಮಾಡುವುದಿಲ್ಲ. ಸಂಪಕರ್ವ ಕಡಿಮೆಯಾಗುತ್ತಿದೆ ಎಂದು ಸೈಫ್ ಹೇಳಿಕೊಂಡಿದ್ದಾರೆ.
ಇನ್ನು ನಟ-ನಿರ್ದೇಶಕ ಫರ್ಹಾನ್ ಖಾನ್ ಸಹ, ಸುಶಾಂತ್ ಸಾವಿನ ಕುರಿತಾಗಿ ವಿಪರೀತ ಮಾತನಾಡುತ್ತಿರುವ ಬಗ್ಗೆ ಸಿಟ್ಟಾಗಿದ್ದು, ಅಂತವರಿಗೆ ಮೊಸಳೆ ಕಣ್ಣೀರು ಸುರಿಸುವವರು ಎಂದು ಪದ್ಯದ ಮೂಲಕ ಲೇವಡಿ ಮಾಡಿದ್ದಾರೆ.