ಡ್ರಗ್ಸ್​ ಕೇಸ್​: ಮಗಳನ್ನು ದೂರ ಇಟ್ಟಿಲ್ಲ ... ಸೈಫ್​ ಅಲಿ ಖಾನ್​ ಸ್ಪಷ್ಟನೆ

Saif Ali Khan - Final
Published on

ಮುಂಬೈ: ಡ್ರಗ್ಸ್​ ಜಾಲದಲ್ಲಿ ಮಗಳು ಸಾರಾ ಅಲಿ ಖಾನ್​ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಸೈಫ್​ ಅಲಿ ಖಾನ್​ ದೂರ ಇಟ್ಟಿದ್ದಾರೆ ಎಂಬ ವಿಷಯ ಕೇಳಿ ಬಂದಿತ್ತು. ಆದರೆ, ಅದು ಅಪ್ಪಟ ಸುಳ್ಳು, ಯಾವುದೇ ಕಾರಣಕ್ಕೂ ಮಗಳನ್ನು ದೂರ ಇಟ್ಟಿಲ್ಲ ಎಂದು ಸೈಫ್​ ಅಲಿ ಖಾನ್​ ಸ್ಪಷ್ಟಪಡಿಸಿದ್ದಾರೆ.

ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಸಂಬಂಧ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು, ಗೆಳತಿ ರಿಯಾ ಚಕ್ರವರ್ತಿ ಅವರನ್ನು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಸುಶಾಂತ್​ ಜತೆಗೆ ಸಾರಾ ಅಲಿ ಖಾನ್​ ಸಹ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂದು ರಿಚಾ ಬಾಯಿಬಿಟ್ಟಿದ್ದರು.

ಈ ಸಂಬಂಧ ಎನ್​ಸಿಬಿ ಅಧಿಕಾರಿಗಳು ಸಾರಾ ಅವರನ್ನು ಕರೆಸಿ ವಿಚಾರಣೆ ಮಾಡಿದ್ದರು. ಯಾವಾಗ ಡ್ರಗ್ಸ್​ ಜಾಲದಲ್ಲಿ ಸಾರಾ ಹೆಸರು ಕೇಳಿಬಂದಿತೋ, ಸಹಜವಾಗಿಯೇ ಸೈಫ್​ ಸಿಟ್ಟಾಗಿದ್ದಾರಂತೆ. ಹೇಳಿಕೇಳಿ ಸಾರಾ, ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಹುಡುಗಿ. ಈಗಷ್ಟೇ ಎರಡು ಚಿತ್ರಗಳಲ್ಲಿ ನಟಿಸಿದ್ದಾಳೆ. ಇಂಥ ಸಂದರ್ಭದಲ್ಲಿ ಸಾರಾಗೆ ಇವೆಲ್ಲಾ ಬೇಕಾಗಿತ್ತಾ ಎಂದು ಸೈಫ್​ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಮುಂಬೈನಲ್ಲಿ ಸಾರಾ ವಿಚಾರಣೆ ವೇಳೆ, ಕರೀನಾ ಮತ್ತು ತೈಮುರ್​ ಜತೆಗೆ ದೆಹಲಿಗೆ ಹೋಗಿದ್ದರು.

ಆ ಕಡೆ ಅಪ್ಪ ಸಿಟ್ಟು ಮಾಡಿಕೊಂಡು ದೂರಾದ ಹಿನ್ನೆಲೆಯಲ್ಲಿ ತಬ್ಬಿಬ್ಬಾದ ಸಾರಾ, ಅಜ್ಜಿ ಶರ್ಮಿಳಾ ಠ್ಯಾಗೋರ್​ ಅವರ ಮೊರೆ ಹೋಗಿದ್ದರು ಮತ್ತು ಹೇಗಾದರೂ ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ದುಂಬಾಲು ಬಿದ್ದಿದ್ದರು ಎಂದು ಸುದ್ದಿಯಾಗಿತ್ತು.

ಆದರೆ, ತಾನು ಮಗಳನ್ನು ದೂರ ಮಾಡಿಲ್ಲ ಎಂದು ಸೈಫ್​ ಅಲಿ ಖಾನ್​ ಇದೀಗ ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಮೂರೂ ಮಕ್ಕಳನ್ನು ಬಹಳ ಪ್ರೀತಿಸುತ್ತೇನೆ ಮತ್ತು ಅವರಿಗೆ ಯಾವಾಗ ಸಮಸ್ಯೆ ಎದುರಾದರೂ ನಾನು ಜತೆಗಿರುತ್ತೇನೆ. ತೈಮುರ್​ ಚಿಕ್ಕವನಾಗಿರುವುದರಿಂದ ನಾನು ಅವನ ಜತೆಗೆ ಹೆಚ್ಚು ಸಮಯ ಕಳೆಯಬಹುದು. ಹಾಗಂತ ಇಬ್ರಾಹಿಂ ಮತ್ತು ಸಾರಾಳನ್ನು ದೂರ ಮಾಡಿಲ್ಲ. ನನ್ನ ಮೂರೂ ಮಕ್ಕಳಿಗೂ ಹೃದಯದಲ್ಲಿ ಜಾಗ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net