

Saif Ali Khan : ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಈ ದಾಳಿ ನಡೆದಿತ್ತು. ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆಹ್ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ.
ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಕಳೆದ ಬುಧವಾರ ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್-ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಬೆನ್ನುಹುರಿ ಸೇರಿದಂತೆ ಸುಮಾರು 6 ಸ್ಥಳಗಳಲ್ಲಿ ಗಾಯಗಳಾಗಿತ್ತು. ವೈದ್ಯರು 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್ ಯಶಸ್ವಿಯಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಸೈಫ್ ಅವರು ಪ್ಲಾಸ್ಟಿಕ್ ಸರ್ಜರಿಗೂ ಒಳಗಾಗಿದ್ದಾರೆ. ವಿಶೇಷವಾಗಿ ಅವರ ಕುತ್ತಿಗೆ ಮತ್ತು ಭುಜದ ಪ್ರದೇಶಗಳಲ್ಲಿ ಆಪರೇಷನ್ ಮಾಡಲಾಗಿದೆ. ಚಿಕಿತ್ಸೆ ಸಮಯದಲ್ಲೇ ಅವರ ಯೋಗಕ್ಷೇಮ ವಿಚಾರಿಸಲು ಸಂಬಂಧಿಕರು ಮತ್ತು ಸ್ನೇಹಿತರು ಆಸ್ಪತ್ರೆಗೆ ಭೇಟಿ ಮಾಡಿದರು. 6 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಸೈಫ್, ನಿನ್ನೆ ಮನೆಗೆ ಮರಳಿದರು. ಅವರನ್ನು ನೋಡಲು ಆಸ್ಪತ್ರೆ ಮತ್ತು ಅವರ ಮನೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಆಸ್ಪತ್ರೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಇದಲ್ಲದೆ, ಮನೆಗೆ ಹಿಂದಿರುಗಿದ ನಂತರವೂ ವೈದ್ಯರು ಅವರಿಗೆ ಒಂದು ವಾರ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅದರಲ್ಲೂ ಸೈಫ್ ಅವರಿಗೆ ಪ್ರಮುಖ ಎಚ್ಚರಿಕೆಯೊಂದನ್ನು ವೈದ್ಯರು ನೀಡಿದ್ದಾರೆ. ಆ ಎಚ್ಚರಿಕೆ ಏನೆಂದರೆ, ಯಾವುದೇ ಸಂದರ್ಶಕರಿಗೆ ಭೇಟಿ ನೀಡಲು ಅವಕಾಶ ನೀಡದಂತೆ ವೈದ್ಯರು ಖಡಕ್ ಆಗಿ ಸೂಚನೆ ನೀಡಿದ್ದಾರೆ. ಮತ್ತೊಮ್ಮೆ ಇದೇ ರೀತಿಯ ಘಟನೆ ಮರುಕಳಿಸಿದರೆ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಸಂದರ್ಶಕರನಿಗೆ ಕಡಿವಾಣ ಹಾಕಿ ಎಂದು ಸಲಹೆ ನೀಡಿದ್ದಾರೆ. ಇದರಿಂದಾಗಿ ಸೈಫ್ ಅವರು ತಮ್ಮ ಮನೆಯಲ್ಲಿ ಭದ್ರೆತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. (ಏಜೆನ್ಸೀಸ್)