ಏಕ್ ದಿನ್ ರಿಲೀಸ್ ಆಗಿ ಒಂದು ವಾರ ಕಳೆದಿದೆ. ಆದರೆ, ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ಮಾತ್ರ ನೀರಸವಾಗಿದೆ. ಜುನೈದ್ ಖಾನ್ರ ನಟನೆ, ಚಿತ್ರದ ಕತೆ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸಾಯಿ ಪಲ್ಲವಿಯವರ ಭಾಷೆ ಹಾಗೂ ನಟನೆ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.
ಕಳೆದ ಏಪ್ರಿಲ್ನಲ್ಲಿ ಏಕ್ ದಿನ್ ನಿರ್ಮಾಪಕರಾದ ಅಮೀರ್ ಖಾನ್ ಅವರು ಮುಂಬೈನಲ್ಲಿ ಏಕ್ ದಿನ್ ಕಿ ಮೆಹ್ಫಿಲ್ ಎಂಬ ಸಂಗೀತ ಸಂಜೆ ಆಯೋಜಿಸಿದ್ದರು. ಈ ವೇಳೆ ಪ್ರೇಕ್ಷಕರ ಬಳಿ ಸಾಯಿ ಪಲ್ಲವಿ ಅವರು ಮಾತನಾಡುವಾಗ ಕಷ್ಟ ಪಟ್ಟರು. ಹಿಂದಿ ಮಾತನಾಡಲು ಬರುವುದಿಲ್ಲ ಗ್ರಾಮರ್ ಮಿಸ್ಟೇಕ್ಗಳಿಗಾಗಿ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದರು.
ಈ ವಿಚಾರವನ್ನೇ ಇಟ್ಟುಕೊಂಡು ಟ್ರೋಲರ್ಸ್ಗಳು ಅವರನ್ನು ಟೀಕೆ ಮಾಡಲು ಶುರು ಮಾಡಿದರು. ಹಿಂದಿ ಬರದ ನಟಿಯನ್ನು ರಾಮಾಯಣ: ಭಾಗ1ಕ್ಕೆ ನಿತೇಶ್ ತಿವಾರಿ ಹೇಗೆಆಯ್ಕೆ ಮಾಡಿಕೊಂಡರು? ಅವರು ಈ ಪಾತ್ರಕ್ಕೆ ಯೋಗ್ಯರಲ್ಲ ಎಂದು ಕಾಮೆಂಟ್ ಮಾಡಲಾಗಿತ್ತು.
ಸಾಯಿ ಪಲ್ಲವಿ ಬೇಸರಕ್ಕೆ ಕಾರಣವೇನು?
ಟೀಕೆಗಳನ್ನು ಎದುರಿಸಿದ ನಂತರ ಸಾಯಿಪಲ್ಲವಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಏಕ್ ದಿನ್ ಸಿನಿಮಾಕ್ಕೆ ಸರಿಯಾದ ಆಯ್ಕೆಯಲ್ಲ. ನನಗಿಂತಲೂ ಲವಲವಿಕೆಯುಳ್ಳ ಹೊಸ ನಟಿಯನ್ನು ಆರಿಸಿಕೊಳ್ಳಬೇಕಿತ್ತು. ಸಿನಿಮಾಗೆ ನನ್ನ ಆಯ್ಕೆ ತಪ್ಪಾಗಿದೆ 'ನಾನು ಮಿಸ್‌ಕಾಸ್ಟ್' ಎಂದು ಹೇಳಿದರು.
ಸಿನಿಮಾ ಒಪ್ಪಿಕೊಳ್ಳಲು ಅಮೀರ್ ಖಾನ್ ಕಾರಣ
ಏಕ್ ದಿನ್ ಚಿತ್ರದ ಪ್ರೀಮಿಯರ್ ನಂತರ ನಾನು ಅಮೀರ್ ಖಾನ್ ಅವರ ಬಳಿ ಹೋಗಿ, ಈ ಪಾತ್ರಕ್ಕೆ ನಾನು ಸರಿಯಾದ ಆಯ್ಕೆಯಲ್ಲ ಎಂದು ನನಗೆ ಅನ್ನಿಸುತ್ತಿದೆ. ಈ ಪಾತ್ರಕ್ಕೆ ಸ್ವಲ್ಪ ಹೆಚ್ಚು ಲವಲವಿಕೆ ಇರುವ ಹೊಸಬರು ಬೇಕಿತ್ತು ಎಂದು ಹೇಳಿದ್ದರಂತೆ. ಮುಂದುವರೆದು, ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ ಇದರ ಕಥೆ ಹಾಲಿವುಡ್‌ನ 'ಬಿಫೋರ್ ಸನ್ ರೈಸ್' ಚಿತ್ರದ ಮಾದರಿಯಲ್ಲಿರುವುದು ಮತ್ತು ಅಮೀರ್ ಖಾನ್ ಅವರ ಮೇಲಿನ ಗೌರವ ಎಂದು ಅವರು ತಿಳಿಸಿದ್ದಾರೆ.
ಸಾಯಿ ಪಲ್ಲವಿ ತಮ್ಮ ನಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಸಹನಟ ಜುನೈದ್ ಖಾನ್ ಅದನ್ನು ನಿರಾಕರಿಸಿದರು. ನೀವು ಕುಡಿದವಳಂತೆ ನಟಿಸಿದ ರೀತಿ ಅದ್ಭುತವಾಗಿತ್ತು, ನೀವು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೀರಿ ಎಂದು ಜುನೈದ್ ಹುರಿದುಂಬಿಸಿದ್ದಾರೆ, (ಏಜೆನ್ಸೀಸ್).