

ಚೆನ್ನೈ: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಧನುಷ್ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಾಣದಿದ್ದರೂ, ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್ ಹಿಟ್ ಆಗಿರುವುದಲ್ಲದೆ, ಹೊಸ ದಾಖಲೆ ಬರೆದಿದೆ.
‘ರೌಡಿ ಬೇಬಿ’ ಹಾಡು ಯೂಟ್ಯೂಬ್ನಲ್ಲಿ ಒಂದು ಬಿಲಿಯನ್ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಾಡನ್ನು ಧನುಷ್ ಮತ್ತು ಧೀ ಹಾಡಿದ್ದಾರೆ. ಈ ಖುಷಿ ವಿಚಾರವನ್ನು ಚಿತ್ರತಂಡ ಸಂಭ್ರಮಿಸಿದ್ದು, ಅದಕ್ಕಾಗಿ ಧನುಷ್ ಅವರ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ವಂಡರ್ಬಾರ್ ಫಿಲ್ಮ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಅಪ್ಲೋಡ್ ಮಾಡಿದ್ದು, ರೌಡಿ ಬೇಬಿ ಸಂಭ್ರಮದ ಸಿಡಿಪಿ ಎಂದು ಬರೆದುಕೊಂಡಿದೆ.
ಧನುಷ್ ಅವರ ಹೊಸ ಸಿಡಿಪಿ ಅವರ ಅಭಿಮಾನಿಗಳಿಗೆ ಖಷಿ ನೀಡಿದರೆ, ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಅಸಮಾಧಾನಗೊಂಡಿದ್ದಾರೆ. ರೌಡಿ ಬೇಬಿ ಯಶಸ್ಸಿನಲ್ಲಿ ಸಾಯಿ ಪಲ್ಲವಿ ಪಾತ್ರವೂ ಪ್ರಮುಖವಾಗಿದೆ. ಅವರ ಅಮೋಘ ಡ್ಯಾನ್ಸ್ ಎಲ್ಲರ ಮನಗೆದ್ದಿದೆ. ಮುಖ್ಯವಾಗಿ ಹೇಳಿಬೇಕೆಂದರೆ ರೌಡಿ ಬೇಬಿ ಹೆಸರು ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಸರ್ ನೇಮ್ ಸಹ ಆಗಿದೆ. ಆದರೆ, ಪೋಸ್ಟರ್ನಲ್ಲಿ ಅವರ ಫೋಟೋ ಇಲ್ಲದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಧನುಷ್ ಇರುವ ಬಗ್ಗೆ ಆಕ್ಷೇಪವಿಲ್ಲ. ಆದರೆ, ಸಾಯಿ ಪಲ್ಲವಿ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಹಾಡು ಅಷ್ಟೊಂದು ಯಶಸ್ಸು ಸಾಧಿಸುವುದರ ಹಿಂದೆ ಸಾಯಿ ಪಲ್ಲವಿ ಶ್ರಮವು ಇದೆ. ಅವರ ನೃತ್ಯದಿಂದಲೇ ಹಾಡು ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಪೋಸ್ಟರ್ನಲ್ಲಿ ಸಾಯಿ ಪಲ್ಲವಿ ಫೋಟೋ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
2015ರಲ್ಲಿ ತೆರೆಕಂಡ ಮಾರಿ ಚಿತ್ರ ಯಶಸ್ಸು ಗಳಿಸಿದ ಬಳಿ ಅದರ ಮುಂದುವರಿದ ಸರಣಿ ಮಾರಿ 2 ಅನ್ನು ಬಾಲಾಜಿ ಮೋಹನ್ ನಿರ್ದೇಶಿಸಿದರು. ಚಿತ್ರವನ್ನು ಧನುಷ್ ತಮ್ಮ ಬ್ಯಾನರ್ ವಂಡರ್ಬಾರ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದರು. ಚಿತ್ರದಲ್ಲಿ ತೊವಿನೋ ಥಾಮಸ್, ಕೃಷ್ಣ ಕುಲಶೇಖರನ್, ವರಲಕ್ಷ್ಮಿ ಸರತ್ಕುಮಾರ್, ವಿದ್ಯಾ ಪ್ರದೀಪ್ ಸೇರಿದಂತೆ ಮುಂತಾದವರು ಬಹು ದೊಡ್ಡ ತಾರಾ ಬಳಗವಿದೆ. (ಏಜೆನ್ಸೀಸ್)