ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ ...

Saahil Khan - Final
Published on

ಸುಶಾಂತ್​ ಸಿಂಗ್​ ಸಾವಿನ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಲಾಢ್ಯರು ಹೇಗೆ ಹೊಸಬರು ಮತ್ತು ಹೊರಗಿನವರನ್ನು ತುಳಿಯುತ್ತಾರೆ, ಅವರನ್ನು ಹೇಗೆಲ್ಲಾ ಸರ್ವನಾಶ ಮಾಡುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈಗ ಸಾಹಿಲ್​ ಖಾನ್​ ಸಹ ಬಾಲಿವುಡ್​ನಲ್ಲಿ ನೆಪೋಟಿಸಂ ಹೇಗೆ ಕೆಲಸ ಮಾಡುತ್ತದೆ, ದೊಡ್ಡವರೆನಿಸಿಕೊಂಡವರು ಚಿಕ್ಕವರನ್ನು ಹೇಗೆ ತುಳಿಯುತ್ತಾರೆ ಎಂದು ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಎಕ್ಸ್​ಕ್ಯೂಸ್​ ಮೀ ಮತ್ತು ಸ್ಟೈಲ್​ ಚಿತ್ರಗಳ ಮೂಲಕ ಹೆಸರಾದವರು ಸಾಹಿಲ್​. ಆ ಕಾಲಕ್ಕೆ ಸಿಕ್ಸ್​ ಪ್ಯಾಕ್​ ಹೀರೋ ಎಂದು ಜನಪ್ರಿಯರಾಗಿದ್ದರು ಅವರು. ಮೊದಲೆರೆಡು ಚಿತ್ರಗಳು ಹಿಟ್​ ಆದರೂ, ಕ್ರಮೇಣ ಅವರಿಗೆ ಅವಕಾಶಗಳು ಕಡಿಮೆಯಾದವು. ಆನಂತರ ಅವರು ಎಲ್ಲಿ ಮಾಯವಾದರೋ ಗೊತ್ತಿಲ್ಲ. ಈಗ ಬಹಳ ವರ್ಷಗಳ ನಂತರ ಸಾಹಿಲ್​ ಇನ್​ಸ್ಟಾಗ್ರಾಂ ಮೂಲಕ ತಮಗಾದ ಅನುಭವನ್ನು ಹೇಳಿಕೊಂಡಿದ್ದಾರೆ.

ಬಹಳ ಕಡಿಮೆ ಹೀರೋಗಳಿಗೆ, ತಮ್ಮ ಮೊದಲ ಚಿತ್ರದ ನಂತರವೇ ಜನಪ್ರಿಯ ಮ್ಯಾಗಜೀನ್​ಗಳ ಕವರ್​ ಪೇಜ್​ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ. ಅಂಥವರಲ್ಲಿ ನಾನೂ ಒಬ್ಬ. ಒಂದು ದೊಡ್ಡ ಮ್ಯಾಗಜೀನ್​ನ ಕವರ್​ ಪೇಜ್​ನಲ್ಲಿ ನನ್ನ ಫೋಟೋ ಬಂದಿತ್ತು, ಇನ್ನಿಬ್ಬರು ಜನಪ್ರಿಯ ಸ್ಟಾರ್​ಗಳ ಜತೆಗೆ. ನಾನು ಆ ಕಾಲಕ್ಕೆ ಹೊಸಬ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಅಭಿಮಾನಿ. ನನಗೆ ಅದು ಬಹಳ ಖುಷಿ ಕೊಟ್ಟಿತ್ತಾದರೂ, ಅದು ಒಬ್ಬ ಸ್ಟಾರ್​ಗೆ ಸರಿ ಬರಲಿಲ್ಲ. ಅವರು ತಮ್ಮ ಚಿತ್ರಗಳಲ್ಲಿನ ಸೈಡ್​ ರೋಲ್​ಗೆ ನನ್ನ ಕರೆದರು. ಟಿವಿ ಶೋಗಳಿಗೂ ಆಹ್ವಾನಿಸಿದರು. ಕ್ರಮೇಣ, ಅವಕಾಶಗಳನ್ನು ಕಿತ್ತುಕೊಂಡರು. ಅವರು ಯಾರಿರಬಹುದು ನೀವೇ ಯೋಚಿಸಿ. ಅವರ ಬಗ್ಗೆ ನಾನು ಕೇರ್​ ಮಾಡುವುದಿಲ್ಲ. ಏಕೆಂದರೆ, ಸುಶಾಂತ್​ ಸಿಂಗ್​ ಅವರೆಲ್ಲರ ನಿಜವಾದ ಮುಖ ಬಯಲು ಮಾಡಿದ್ದಾರೆ. ಈ ಜನ, ಹಲವು ಹೊಸ ಪ್ರತಿಭೆಗಳನ್ನು ಹೊಸಕಿ ಹಾಕಿದರು. ಕಳೆದ 20 ವರ್ಷಗಳಲ್ಲಿ ಜಾನ್​ ಅಬ್ರಹಾಂ ಬಿಟ್ಟರೆ, ಯಾರೂ ಸಹ ಸ್ಟಾರ್ ಆಗುವುದಕ್ಕೆ ಸಾಧ್ಯವಾಗಲೇ ಇಲ್ಲ. ಏಕೆಂದರೆ, ಅವರು ಯಾರನ್ನೂ ಸ್ಟಾರ್​ ಆಗುವುದಕ್ಕೆ ಬಿಡಲೇ ಇಲ್ಲ. ಇಲ್ಲಿ ಸ್ಟಾರ್​ ಮಕ್ಕಳಿಗೆ ಮಾತ್ರ ಬೆಲೆ ಎಂದು ಸಾಹಿಲ್​ ಬರೆದುಕೊಂಡಿದ್ದಾರೆ.

ಇದರ ಜತೆಗೆ, ಆ ಮ್ಯಾಗಜೀನ್​ನ ಕವರ್​ಪಜೇಜ್​ ಸಹ ಹಾಕಿದ್ದಾರೆ. ಅದರಲ್ಲಿ, ದಿ ನ್ಯೂ ಖಾನ್​ ಇನ್​ ಟೌನ್​ ಎಂಬ ಶೀರ್ಷಿಕೆ ಇರುವ ಲೇಖನ ಇದೆ. ಈ ಲೇಖನ ಬಂದ ನಂತರ, ಸಾಹಿಲ್​ ಖಾನ್​ಗೆ ಬಾಲಿವುಡ್​ನಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಇಷ್ಟಕ್ಕೂ ಅವರ ಕೆಲಸ ಕಿತ್ತುಕೊಂಡ ಸ್ಟಾರ್ ಯಾರು? ನೀವೇ ಯೋಚಿಸಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net