

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿನಿಮಾ ಪ್ರಚಾರಕ್ಕಾಗಿ ತಂಡಗಳು ನಾನಾ ಐಡಿಯಾ ಮಾಡುವುದು ಸಾಮಾನ್ಯ. ಏಕೆಂದರೆ, ಇವತ್ತಿನ ಆನ್ಲೈನ್ ದುನಿಯಾದಲ್ಲಿ ಅದೆಷ್ಟು ಪ್ರಮೋಷನ್ ಮಾಡಿದರೂ ಕಡಿಮೆಯೇ ಎನ್ನುವಂತಹ ಪರಿಸ್ಥಿತಿ ಇದೆ. ಹೀಗಾಗಿಯೇ ಕೃಷಿ ಸಚಿವ ಚಲವರಾಯಸ್ವಾಮಿ ಪುತ್ರ ಸಚಿನ್ ನಾಯಕನಾಗಿರುವ, ಸಂಗೀತಾ ಭಟ್, ಅತಾ ಬೋಪಯ್ಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ "ಕಮಲ್ ಶ್ರಿದೇವಿ' ಚಿತ್ರತಂಡ, ಸಿನಿಮಾ ಪ್ರಚಾರಕ್ಕಾಗಿ ಭಿನ್ನ, ವಿಭಿನ್ನ ಪ್ಲಾನ್ ಮಾಡಿಕೊಂಡಿದೆ.
ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿ ಬಿಜಿಯಾಗಿದೆ. ಅದರ ನಡುವೆಯೇ ಪ್ರಚಾರಕ್ಕೂ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಸಚಿನ್, ಸಂಗೀತಾ ಮತ್ತು ಅತಾ ಕೆ.ಆರ್. ಮಾರುಕಟ್ಟೆಯ ವಿವಿಧ ಹಿನ್ನೆಲೆಯಲ್ಲಿ ಚಿತ್ರದ ಪಾತ್ರಗಳ ಗೆಟಪ್ನಲ್ಲಿಯೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ.
ಹೂ ಮಾರ್ಕೆಟ್, ಹಣ್ಣು-ತರಕಾರಿ ಅಂಗಡಿಗಳು, ಮಾರುಕಟ್ಟೆ ಕಟ್ಟಡದ ಮೇಲೆ, ಕೋಟೆ ಬೀದಿಯಲ್ಲಿ ಮಂಗಳಮುಖಿಯರ ಜತೆ, ಕವಡೆ ಶಾಸ್ತ್ರ ಕೇಳುತ್ತಾ, ಖಾಸಗಿ ಬಸ್ ನಿಲ್ದಾಣದಲ್ಲಿ, ಬಸ್ ಒಳಗೆ... ಹೀಗೆ "ಕಮಲ್ ಶ್ರೀದೇವಿ' ಟೀಮ್ ಕೆ.ಆರ್. ಮಾರ್ಕೆಟ್ನ ಹಲವೆಡೆ ಸುತ್ತು ಹಾಕಿದೆ. ಬಿ.ಎ. ಸುನೀಲ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಸ್ವರ್ಣಾಂಬಿಕಾ ಪಿಕ್ಚರ್ಸ್ ಬ್ಯಾನರ್ನಲ್ಲಿ ಬಿ.ಕೆ. ಧನಲಕ್ಷಿ$್ಮ ನಿರ್ಮಿಸುತ್ತಿದ್ದು ನಟ ರಾಜವರ್ಧನ್ ಸಹ ನಿರ್ಮಾಪಕನಾಗಿ ಜತೆಯಾಗಿದ್ದಾರೆ.
ಅಂದಹಾಗೆ, ಮಾರ್ಕೆಟ್ನಲ್ಲಿ ಫೋಟೋಶೂಟ್ ಮಾಡಿದ್ದರ ಬಗ್ಗೆ ನಾಯಕ ಸಚಿನ್, "ಚಿತ್ರಕ್ಕೂ, ಫೋಟೋಶೂಟ್ಗೂ ತುಂಬ ಹತ್ತಿರದ ಸಂಬಂಧವಿದೆ. ಈ ಫೋಟೋಶೂಟ್ ಮೂಲಕ ಮೂರೂ ಪಾತ್ರಗಳ ಬಗ್ಗೆ ಕ್ಲೂ ಕೊಟ್ಟಿದ್ದೇವೆ' ಎನ್ನುತ್ತಾರೆ. ಅವರ ಜತೆ ಧ್ವನಿಗೂಡಿಸುವ ನಾಯಕಿ ಸಂಗೀತಾ ಭಟ್, "ಮಾರ್ಕೆಟ್ನಲ್ಲಿ ಫೋಟೋಶೂಟ್ ಮಾಡಿದ ಅನುಭವ ವಿಶೇಷವಾಗಿತ್ತು. ಸಾಮಾನ್ಯ ಜನರ ನಡುವೆ ಶೂಟಿಂಗ್ ಮಾಡುವಾಗ ಅವರು ನಮ್ಮನ್ನು ನೋಡಿ ಅವರು ನೀಡುತ್ತಿದ್ದ ಪ್ರತಿಕ್ರಿಯೆ ತುಂಬ ಪಾಸಿಟಿವ್ ಫೀಲ್ ನೀಡಿತು' ಎಂದು ಸಂತಸ ಹಂಚಿಕೊಳ್ಳುತ್ತಾರೆ.