ಸಿನಿಮಾ ಪಾಠ ಹೇಳಿಕೊಡುತ್ತಾರಂತೆ ಹಿರಿಯ ನಟ-ನಿರ್ದೇಶಕ ಎಸ್​. ನಾರಾಯಣ್​

Kalasamrat Kala Academy (1)
Published on

ಬೆಂಗಳೂರು: ಕನ್ನಡದ ಹಿರಿಯ ನಟ-ನಿರ್ದೇಶಕ ಈ ಹಿಂದೆ ನವರಸ ಫಿಲ್ಮ್​ ಅಕಾಡೆಮಿ ಎಂಬ ನಟನಾಶಾಲೆಯಲ್ಲಿ ನಟನೆಯ ಪಾಠ ಹೇಳಿಕೊಡುತ್ತಿದ್ದರು. ಹಲವು ವಿದ್ಯಾರ್ಥಿಗಳನ್ನು ತಯಾರು ಮಾಡಿದವರು. ಈಗ ಅವರ ಮಗ ಪವನ್​ ಎಸ್​ ನಾರಾಯಣ್​ ಕಲಾ ಸಾಮ್ರಾಟ್​ ಫಿಲ್ಮ್​ ಅಕಾಡೆಮಿ ಎಂಬ ಹೊಸ ಅಭಿನಯ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲೂ ಸಹ ನಾರಾಯಣ್​ ತಮಗೆ ಗೊತ್ತಿರುವ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದ್ದಾರಂತೆ.

ಇತ್ತೀಚೆಗೆ ಹಿರಿಯ ನಿರ್ದೇಶಕ ಮತ್ತು ಎಸ್​. ನಾರಾಯಣ್​ ಅವರ ಗುರು ಭಾರ್ಗವ ಈ ನೂತನ ಸಿನಿಮಾ ಶಾಲೆಯನ್ನು ಉದ್ಘಾಟಿಸಿದರು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ವಿ.ಮನೋಹರ್, ಎಂ.ಎನ್ ಸುರೇಶ್, ನಾಯಕ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಅಭಿನಯ ಶಾಲೆಯ ಕುರಿತು ಮಾತನಾಡಿದ ನಾರಾಯಣ್​, 'ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ.‌ ಈಗ ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಅರಂಭಿಸಿದ್ದಾನೆ. ಈ ವಿಷಯ ಕುರಿತು ನನ್ನ ಬಳಿ ಪವನ್ ಹೇಳಿದಾಗ, ಕಲಾ ಸಾಮ್ರಾಟ್ ಎಂಬ ಹೆಸರಿಗೆ ಕಪ್ಪುಚುಕ್ಕೆ ಬರದಂತೆ ನೋಡಿಕ್ಕೊಳ್ಳುವ ಜವಾಬ್ದಾರಿ ನಿನ್ನದು. ಏಕೆಂದರೆ, ಎಸ್ ನಾರಾಯಣ್ ಎಂದು ನನ್ನ ತಂದೆಯಿಟ್ಟ ಹೆಸರು. 'ಕಲಾ ಸಾಮ್ರಾಟ್' ಜನ ಕೊಟ್ಟಿದ್ದು. ಆ ಹೆಸರಿಗೆ ಏನು ಆಗಬಾರದು ಎಂದು ಹೇಳಿದ್ದೇನೆ. ಪವನ್ ಸಹ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾನೆ. ನಟನೆ, ನಿರ್ದೇಶನ ಹಾಗೂ ಚಲನಚಿತ್ರದ ಹಲವಾರು ವಿಭಾಗಗಳಲ್ಲಿ ತರಬೇತಿಯನ್ನು ಇಲ್ಲಿ ನೀಡಲಾಗುವುದು' ಎನ್ನುತ್ತಾರೆ.

ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಈ ಶಾಲೆಯಲ್ಲಿ ಹಂಚಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net