ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲದಲ್ಲಿ 1938ರ ಏಪ್ರಿಲ್ 23 ರಂದು ಜನಿಸಿದ ಎಸ್. ಜಾನಕಿ ಅವರು, ಆನಂತರ ಮೈಸೂರನ್ನು ತಮ್ಮ ನೆಚ್ಚಿನ ನೆಲೆಯಾಗಿಸಿಕೊಂಡಿದ್ದರು. ಅವರ ಆಸೆಯಂತೆಯೇ ಅವರ ಕೊನೆಯ ವಿಧಿವಿಧಾನಗಳನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನೆರವೇರಿಸಲಾಯಿತು. ತಮ್ಮ 19ನೇ ವಯಸ್ಸಿನಲ್ಲಿ ತಮಿಳಿನ 'ವಿಧಿಹಿನ್ ವಿಲಾಯಾಟ್ಟು' (1957) ಚಿತ್ರದ ಮೂಲಕ ಗಾಯನ ಯಾತ್ರೆ ಆರಂಭಿಸಿದ ಜಾನಕಮ್ಮ, ಆರು ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 20 ಭಾರತೀಯ ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಪ್ರತಿಮ ದಾಖಲೆ ಬರೆದಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಜನಪ್ರಿಯರಾಗಿದ್ದರೂ, ಅವರು ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲೂ ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಡಾ. ರಾಜ್‌ಕುಮಾರ್ ಅವರೊಂದಿಗೆ ಅವರು ಹಾಡಿದ ಯುಗಳ ಗೀತೆಗಳು ಇಂದಿಗೂ ಸದಾ ಹಸಿರಾಗಿವೆ.