

ಮುಂಬೈ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಕುರಿತು ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿರುವ ನಡುವೆಯೇ ಸುಶಾಂತ್ ಅವರ ಫ್ಯಾಮಿಲಿ ಲಾಯರ್ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಸುಶಾಂತ್ ತಂದೆ ನಿನ್ನೆಯಷ್ಟೇ ಪಟನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಸಲ್ಲಿಸಿರುವ ಎಫ್ಐಆರ್ ಮಾಹಿತಿಯಲ್ಲೂ ರಿಯಾ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂಬುದು ಸೇರಿ ಸಾಕಷ್ಟು ಆರೋಪಗಳನ್ನು ಮಾಡಲಾಗಿದೆ.
ಮಾಧ್ಯಮವೊಂದರಲ್ಲಿ ಮಾತನಾಡಿರುವ ಫ್ಯಾಮಿಲಿ ಲಾಯರ್, ಮುಂಬೈ ಪೊಲೀಸರು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಬಾಂದ್ರಾ ಡಿಸಿಪಿಗೆ ಸುಶಾಂತ್ ಸ್ನೇಹಿತರ ಮೇಲೆ ಕಣ್ಣಿಡಿ ಎಂದು ನಾನು ಮನವಿ ಮಾಡಿದ್ದೆ ಎಂದು ತಿಳಿಸಿದ ಲಾಯರ್, ರಿಯಾ ವಿರುದ್ಧ ಮಾತನಾಡಿ, ಸುಶಾಂತ್ ಆತ್ಮಹತ್ಯೆಯಲ್ಲಿ ರಿಯಾ ಪಾತ್ರವಿದೆ. ಆತನೊಂದಿಗೆ ಇದ್ದಾಗ ಮಾನಸಿಕ ಸ್ಥಿತಿ ಹದಗೆಡಲು ಅವಳೇ ಕಾರಣ. ಅಲ್ಲದೆ, ಮನಶ್ಶಾಸ್ತ್ರಜ್ಞರು ಮತ್ತು ಔಷಧಿಗಳನ್ನು ಆಕೆಯೇ ಆಯ್ಕೆ ಮಾಡುತ್ತಿದ್ದಳು. ಸುಶಾಂತ್ ಖಾತೆಯಿಂದ 15 ಕೋಟಿ ರೂ. ಹಣವನ್ನು ನಿಗೂಢವಾಗಿ ಎಗರಿಸಿದ್ದಳು ಎಂದು ಆರೋಪಿಸಿದ್ದಾರೆ.
ಸುಶಾಂತ್ನನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಳು. ತಂದೆಯನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಅನೇಕ ಸಂದರ್ಭದಲ್ಲಿ ತನ್ನ ಮಗನನ್ನು ನೋಡಲು ಸುಶಾಂತ್ ತಂದೆ ಪ್ರಯತ್ನಿಸಿದ್ದಾರೆ. ಆದರೆ, ರಿಯಾ ಬಾಡಿಗಾರ್ಡ್ ಮೂಲಕ ಅವರನ್ನು ತಡೆಯುತ್ತಿದ್ದಳು. ಒಂದು ವೇಳೆ ಆತ ಕುಟುಂಬದಿಂದ ದೂರ ಉಳಿಯದೇ ಇದ್ದಿದ್ದರೆ, ಇಂದು ಸುಶಾಂತ್ಗೆ ಈ ಗತಿ ಬರುತ್ತಿರಲಿಲ್ಲ. ಅನೇಕ ದಿನಗಳವರೆಗೆ ಸಂಚು ರೂಪಿಸಿ, ತಮ್ಮ ಕಾರ್ಯಯೋಜನೆಯನ್ನು ಸಂಪೂರ್ಣಗೊಳಿಸಿದ್ದಾರೆ. ಇದು ಕೊಲೆಯಲ್ಲ. ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆಪಾದನೆ ಮಾಡಿದರು.
ಪಟನಾ ಪೊಲೀಸರು ಈವರೆಗೂ ರಿಯಾ ಬಂಧಿಸುವ ಪ್ರಯತ್ನ ಮಾಡಿಲ್ಲ. ಆದರೆ, ಅವರು ಬಂಧಿಸುತ್ತಾರೆಂಬ ಭರವಸೆ ಇದೆ. ಪ್ರಕರಣದಲ್ಲಿ ಬೇರೆಯವರನ್ನು ಬಂಧಿಸುವ ಅಗತ್ಯವಿಲ್ಲ. ರಿಯಾನೇ ಪ್ರಕರಣದ ಕೇಂದ್ರ ಬಿಂದುವಾಗಿದ್ದಾಳೆ. ಸೆಕ್ಷನ್ 306ರ ಅಡಿಯಲ್ಲಿ ಆಕೆಗೆ 10 ವರ್ಷದ ಶಿಕ್ಷೆಗೆ ಗುರಿಪಡಿಸಬೇಕು. ಎಫ್ಐಆರ್ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಕಸ್ಟಡಿಯಲ್ ವಿಚಾರಣೆ ನಡೆದರೆ ಅವಳನ್ನು ಬಂಧಿಸಲೇಬೇಕಾಗುತ್ತದೆ ಎಂದಿದ್ದಾರೆ.
ಸುಶಾಂತ್ನನ್ನು ರಿಯಾ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದಳು. ಇದೇ ಆತನ ಮಾನಸಿಕ ಸಮಸ್ಯೆಗೆ ಕಾರಣವಾಗಿತ್ತು. ಅಲ್ಲದೆ, ಆತನಿಗೆ ನೀಡುವ ಔಷಧಿ ಮೇಲೂ ಅವಳ ಪ್ರಭಾವ ಇತ್ತು. ಬಹುಶಃ ಇದೆಲ್ಲ ಅವಳು ರೂಪಿಸಿದ ಸಂಚಿನ ಭಾಗವಾಗಿತ್ತು ಎನ್ನಲಾಗಿದೆ. ತನಿಖೆ ನಡೆದರೆ ಇದೆಲ್ಲ ಸ್ಪಷ್ಟವಾಗಬಹುದು. ಸುಶಾಂತ್ ತೆಗೆದುಕೊಳ್ಳುತ್ತಿದ್ದ ಔಷಧಿ, ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹಾಗೂ ಬದಲಾದ ವೈದ್ಯರು ಇದೆಲ್ಲ ತನಿಖೆಯಲ್ಲಿ ತಿಳಿದುಬರಲಿದೆ ಎಂದಿದ್ದಾರೆ. (ಏಜೆನ್ಸೀಸ್)