

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದೆ. ಮೂಲಗಳ ಪ್ರಕಾರ, ಈ ಚಿತ್ರವು ಬಿಡುಗಡೆಗೆ ಮುನ್ನವೇ 900 ಕೋಟಿ ಬಿಜಿನೆಸ್ ಮಾಡಿದ್ದು, ಭಾರತೀಯ ಚಿತ್ರವೊಂದು ಬಿಡುಗಡೆಗೂ ಮುನ್ನ ಇಷ್ಟೊಂದು ದುಡ್ಡು ಮಾಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ‘ಆರ್ಆರ್ಆರ್’ ಚಿತ್ರವು ಅಕ್ಟೋಬರ್ 23ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ವಿತರಣೆ, ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳನ್ನು ಪಡೆಯುವುದಕ್ಕೆ ದೊಡ್ಡ ಪೈಪೋಟಿಯೇ ನಡೆಯಿತಂತೆ. ಅಂತಿಮವಾಗಿ ಚಿತ್ರದ ಎಲ್ಲ ಪ್ರದೇಶಗಳ ವಿತರಣಾ ಹಕ್ಕುಗಳನ್ನು ದಾಖಲೆಯ 570 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಇನ್ನು, ಚಿತ್ರದ ಎಲ್ಲ ಅವತರಣಿಕೆಗಳ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು 300 ಕೋಟಿಗಳಿಗೆ ಮಾರಾಟ ಮಾಡಲಾಗಿದೆಯಂತೆ. ಅಲ್ಲಿಗೆ, 870 ಕೋಟಿ ವಾಪಸ್ಸಾದಂತೆ. ಆಡಿಯೋ ಸೇರಿದಂತೆ ಬೇರೆ ಹಕ್ಕುಗಳಿಂದಲೂ ಇನ್ನಷ್ಟು ಕೋಟಿ ಬಂದಿದ್ದು, ಒಟ್ಟಾರೆ ಚಿತ್ರವು 900 ಕೋಟಿ ಬಿಜಿನೆಸ್ ಮಾಡಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಜೆಟ್ 300ರಿಂದ 400 ಕೋಟಿ ಎಂದು ಹೇಳಲಾಗಿದ್ದು, ಬಿಡುಗಡೆಗೆ ಮುನ್ನವೇ ಚಿತ್ರದ ನಿರ್ವಪಕ ಡಿ.ವಿ.ವಿ. ದಾನಯ್ಯ, ಹಾಕಿದ ದುಡ್ಡಿಗಿಂಥ ಡಬ್ಬಲ್ ಹಣವನ್ನು ವಾಪಸ್ಸು ಪಡೆದಂತಾಗುತ್ತದೆ.
ಅಜಯ್ಗೆ ಟೀಸರ್ ಗಿಫ್ಟ್: ಶನಿವಾರ, ಅಜಯ್ ದೇವಗನ್ ಅವರ ಹುಟ್ಟುಹಬ್ಬದ ಅಂಗವಾಗಿ, ಚಿತ್ರತಂಡವು ಅವರ ಪೋಸ್ಟರ್ ಮತ್ತು ಕಿರು ಟೀಸರ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರ ಮಾಡಿದ್ದು, ಅವರ ಪಾತ್ರವು ಚಿತ್ರದ ಹೈಲೈಟ್ಗಳಲ್ಲೊಂದು ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಅಜಯ್, ಬ್ರಿಟಿಷರ ವಿರುದ್ಧ ಹೋರಾಡುವ ಕ್ರಾಂತಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.