ಒಂದೇ ದಿನಕ್ಕೆ 223 ಕೋಟಿ ರೂಪಾಯಿ!; ಹೊಸ ದಾಖಲೆ ಬರೆದ ಆರ್​ಆರ್​ಆರ್

RRR
Published on

ರಾಜಮೌಳಿ ನಿರ್ದೇಶನದ ‘ಆರ್​ಆರ್​ಅರ್’ ಚಿತ್ರವು ಮೊದಲ ದಿನವೇ ದೊಡ್ಡ ಮಟ್ಟದ ಕಲೆಕ್ಷನ್ ಕಾಣಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇತ್ತು. ಅದು ನಿಜವಾಗಿದೆ. ಚಿತ್ರವು ಮೊದಲ ದಿನವೇ 223 ಕೋಟಿ ರೂ.ಗಳ ಕಲೆಕ್ಷನ್ ದಾಖಲಿಸಿರುವುದಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ಮಾಡಿದೆ. ಈ ಮೂಲಕ ಇದುವರೆಗೂ ‘ಬಾಹುಬಲಿ 2’ ಹೆಸರಲ್ಲಿದ್ದ ದಿನವೊಂದರ ಗರಿಷ್ಠ ದಾಖಲೆಯನ್ನು ‘ಆರ್​ಆರ್​ಅರ್’ ಮುರಿದಿದೆ.

‘ಆರ್​ಆರ್​ಆರ್’ ಚಿತ್ರವು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಪೈಕಿ ಭಾರತದಲ್ಲೇ 156 ಕೋಟಿ ರೂ.ಗಳ ಗ್ರಾಸ್ ಸಂಗ್ರಹ ಆಗಿದೆಯಂತೆ. ಅಮೆರಿಕಾದಲ್ಲಿ 42 ಕೋಟಿ ರೂ.ಗಳಾದರೆ, ಮಿಕ್ಕಂತೆ ಬೇರೆ ದೇಶಗಳಿಂದ 25 ಕೋಟಿ ರೂ.ಗಳು ಬಂದಿದ್ದು, ಒಟ್ಟಾರೆ 223 ಕೋಟಿ ರೂ.ಗಳ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ಆಂಧ್ರದಲ್ಲೇ ಗರಿಷ್ಠ 75 ಕೋಟಿ ರೂ.ಗಳಾದರೆ, ಕೇರಳದಲ್ಲಿ ಕನಿಷ್ಠ 4 ಕೋಟಿಗಳಾಗಿವೆ. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದಲ್ಲಿ ಕ್ರಮವಾಗಿ 14.5, 10 ಮತ್ತು 25 ಕೋಟಿ ರೂ.ಗಳ ಸಂಗ್ರಹವಾಗಿದೆಯಂತೆ.

ಇದು ಮೊದಲ ದಿನದ ಗಳಿಕೆಯಷ್ಟೇ. ಚಿತ್ರದ ಕುರಿತು ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ಇದ್ದು, ಇದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್​ನಲ್ಲಿ ಇನ್ನಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ. ಒಟ್ಟಾರೆ, ಮೊದಲ ವಾರ ಚಿತ್ರವು ಎಷ್ಟು ಗಳಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net