ಒನ್ ಕಟ್ ಟು ಕಟ್​ನಲ್ಲಿ ರೂಪಾ ರಾಯಪ್ಪ; ಪುನೀತ್ ನಿರ್ಮಾಣದ ಚಿತ್ರದಲ್ಲಿ ನೆಗೆಟಿವ್ ಶೇಡ್

Roopa
Published on

ಬೆಂಗಳೂರು: ‘ಕೆಜಿಎಫ್’ ಚಿತ್ರದಲ್ಲಿ ನಟಿಸಿದ ಬಳಿಕ ಹಲವು ಸಿನಿಮಾ ಅವಕಾಶಗಳನ್ನು ಪಡೆಯುತ್ತಿರುವ ನಟಿ ರೂಪಾ ರಾಯಪ್ಪ, ಇದೀಗ ಕನ್ನಡದ ಜತೆಗೆ ತೆಲುಗು, ಹಿಂದಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಪುನೀತ್ ರಾಜಕುಮಾರ್ ಅವರ ಪಿಆರ್​ಕೆ ಬ್ಯಾನರ್​ನ ಸಿನಿಮಾಕ್ಕೂ ಆಯ್ಕೆಯಾಗಿದ್ದು, ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಅಷ್ಟೇ ಅಲ್ಲ ಹಿಂದಿಯ ವೆಬ್​ಸಿರೀಸ್​ವೊಂದರಲ್ಲಿಯೂ ಅವರು ನಾಯಕಿಯಾಗಿ ನಟಿಸಿದ್ದಾರೆ. ‘ಡಾ. ರಾಜಕುಮಾರ್ ಅವರ ಕುಟುಂಬದವರ ಜತೆಗೆ ನಟಿಸಲು ಅವಕಾಶ ಸಿಗುವುದೇ ಅಪರೂಪ. ಅಂಥದರಲ್ಲಿ ಪುನೀತ್ ಹೋಮ್ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿರುವ ‘ಒನ್ ಕಟ್ ಟು ಕಟ್’ ಚಿತ್ರದಲ್ಲಿ ವಿಶೇಷ ಪಾತ್ರವೊಂದು ಸಿಕ್ಕಿದೆ. ಹಾಗಾಗಿ ಖುಷಿ ಇಮ್ಮಡಿಯಾಗಿದೆ’ ಎನ್ನುವ ರೂಪಾ, ‘ಒನ್ ಕಟ್ ಟು ಕಟ್’ ಚಿತ್ರದಲ್ಲಿ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಂಶಿಧರ್ ಭೋಗರಾಜು ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ದಾನಿಶ್ ಸೇಠ್ ಕಲಾ ವಿಭಾಗದ ಶಿಕ್ಷಕನಾದರೆ, ಸಂಯುಕ್ತಾ ಹೊರನಾಡು ವಿಜ್ಞಾನ ವಿಷಯದ ಟೀಚರ್ ಆಗಿ ನಟಿಸುತ್ತಿದ್ದಾರೆ. ಇವರಿಬ್ಬರ ನಡುವೆ ರೂಪಾ ಅವರದ್ದು ಉತ್ತರ ಭಾರತದ ಹುಡುಗಿಯ ಪಾತ್ರ. ಈ ಸಿನಿಮಾ ಹೊರತುಪಡಿಸಿ, ಕನ್ನಡದಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಗಿರಿರಾಜ್ ಬಿ.ಎಂ, ಹಿಂದಿಯಲ್ಲಿಯೂ ಥ್ರಿಲ್ಲರ್ ಎಳೆಯ ವೆಬ್​ಸರಣಿಯೊಂದನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ರೂಪಾ ರಾಯಪ್ಪ ನಾಯಕಿಯಾಗಿದ್ದು, ಅದರ ಬಹುತೇಕ ಕೆಲಸ ಮುಕ್ತಾಯವಾಗಿದೆ. ‘ಒಕ ಅಮ್ಮಾಯಿ ಇದ್ದರು ಅಬ್ಬಾಯಿ’ ಚಿತ್ರದ ಮೂಲಕ ಟಾಲಿವುಡ್​ಗೂ ರೂಪಾ ಪ್ರಯಾಣ ಬೆಳೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net