ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟುಮಾಡಿದ ಯಶ್​! ರಾಕಿ ಭಾಯ್​​ ಹೇಳಿದ ಮಾತೇನು? ​

Yash
Published on

ಬೆಂಗಳೂರು: ಜನವರಿ 8 ಎಷ್ಟು ಬೇಗ ಬರುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಾಕಿಂಗ್​ ಸ್ಟಾರ್​ ಯಶ್​ ನಿರಾಸೆ ಮೂಡಿಸಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುವುದಿಲ್ಲ ಎಂಬ ಸಂದೇಶವನ್ನು ಯಶ್​ ರವಾನಿಸಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಮಾಹಿತಿ ಹಂಚಿಕೊಂಡಿರುವ ಯಶ್​, ಜನವರಿ 8, ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆಪಡುವ ದಿನ. ನನಗೂ ಅಷ್ಟೇ ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲದ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾಗಿರುವುದರಿಂದ ಈ ಜನವರಿ 8ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು ಸದಾಕಾಲ ನನ್ನ ಜತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ ಎಂದು ಯಶ್​ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Yash

ಟಾಕ್ಸಿಕ್​ನಲ್ಲಿ ಯಶ್​ ಬಿಜಿ

ಇನ್ನು ‘ಕೆಜಿಎಫ್’ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ ‘ಟಾಕ್ಸಿಕ್’ ಎಂದು ಘೋಷಿಸಿದರು. ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಅಂದಹಾಗೆ ಹಿಂದಿ ಚಲನಚಿತ್ರ ವಲಯಗಳಿಂದ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರಂತೆ. ಕರೀನಾ ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋಬೈಟ್ ಅನ್ನು ಅನಾವರಣಗೊಳಿಸಲಾಗಿದೆ.

‘ಟಾಕ್ಸಿಕ್’ ಗೋವಾ ಹಿನ್ನಲೆಯುಳ್ಳ ಚಿತ್ರವಾಗಿದ್ದು, ಕಥೆಯು ಡ್ರಗ್ಸ್ ಸುತ್ತ ಸುತ್ತುತ್ತದೆ ಎಂಬ ವರದಿಗಳಿವೆ. KVN ಪ್ರೊಡಕ್ಷನ್ಸ್ ನಿರ್ಮಾಪಕರು ಚಿತ್ರವು ಏಪ್ರಿಲ್ 10, 2025 ರಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕರೀನಾ ಕಪೂರ್ ಖಾನ್ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಶೀಘ್ರದಲ್ಲೇ ಅಜಯ್ ದೇವಗನ್ ಅವರೊಂದಿಗೆ ಸಿಂಗಮ್ ಎಗೇನ್ ಸೆಟ್‌ಗೆ ಸೇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net