ನಾನು ವನಿತಾಳ ಮೂರನೇ ಗಂಡ ಅಲ್ಲ: ರಾಬರ್ಟ್

Final - Marriage
Published on

ತಮಿಳಿನ ಖ್ಯಾತ ನಟ ವಿಜಯಕುಮಾರ್ ಅವರ ಮಗಳು ವಿನಿತಾ ವಿಜಯಕುಮಾರ್ ಅವರ ಮೂರನೇ ಮದುವೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಈಗಾಗಲೇ ಈ ಮದುವೆಯ ಕುರಿತಾಗ ತಮಿಳಿನ ಹಲವು ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಕುಟ್ಟಿ ಪದ್ಮಿನಿ, ಕಸ್ತೂರಿ, ಲಕ್ಷ್ಮೀ ರಾಮಕೃಷ್ಣನ್ ಮುಂತಾದವರು ಈ ಮದುವೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದೀಗ ನೃತ್ಯ ನಿರ್ದೇಶಕ ರಾಬರ್ಟ್ ಸಹ ಈ ವಿಷಯವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಕೆಲವರು ಬಿಂಬಿಸುತ್ತಿದ್ದಂತೆ, ತಾನು ವನಿತಾ ಅವರ ಮೂರನೆಯ ಗಂಡ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತಮಗೂ ವನಿತಾಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ವನಿತಾ ಮತ್ತು ರಾಬರ್ಟ್ ಒಂದು ಕಾಲದಲ್ಲಿ ಸ್ನೇಹಿತರಾಗಿ ಗುರುತಿಸಿಕೊಂಡಿದ್ದವರು. ಅಷ್ಟೇ ಅಲ್ಲ, `ಎಂಜಿಆರ್ ಶಿವಾಜಿ ರಜನಿ ಕಮಲ್' ಎಂಬ ಚಿತ್ರದ ಮೂಲಕ ರಾಬರ್ಟ್ ಅವರನ್ನು ಇದೇ ವನಿತಾ ವಿಜಯಕುಮಾರ್ ಹೀರೋ ಮಾಡಿದ್ದರು. ರಾಬರ್ಟ್‍ಗಾಗಿ ವನಿತಾ ನಿರ್ಮಾಪಕಿಯೂ ಆಗಿ ಗುರುತಿಸಿಕೊಂಡಿದ್ದರು. ಅದಕ್ಕೆ ಸರಿಯಾಗಿ, ವನಿತಾಗೆ ಕೃತಜ್ಞತಾಪೂರ್ವಕವಾಗಿ ರಾಬರ್ಟ್ ತಮ್ಮ ಕೈ ಮೇಲೆ ವನಿತಾ ಎಂದು ಟ್ಯಾಟೂ ಸಹ ಹಾಕಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರ ಸ್ನೇಹ ಗಾಢವಾಗಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ರಾಬರ್ಟ್ ಅವರನ್ನು ವನಿತಾ ಮೂರನೆಯ ಮದುವೆಯಾಗಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ಸುದ್ದಿಯೂ ಆಗಿತ್ತು. ಆದರೆ, ಅವೆಲ್ಲವೂ ಸುಳ್ಳು ಎಂದು ರಾಬರ್ಟ್ ಇದಿಗ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಮಧ್ಯೆ ಗೆಳೆತನ ಮಾತ್ರ ಇತ್ತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, `ವನಿತಾಗೆ ಹಠಮಾರಿತನ ಜಾಸ್ತಿ. ಅವರು ಯಾವತ್ತೂ ರಾಜಿಯಾಗುವುದಿಲ್ಲ. ಅದೇ ಕಾರಣಕ್ಕೆ ಅವರು ತಮ್ಮ ಎರಡು ಹಳೆಯ ಮದುವೆಗಳನ್ನು ಮುರಿದುಕೊಂಡರು ಮತ್ತು ಡೈವೋರ್ಸ್ ಪಡೆದರು. ಅವರ ಹಠಮಾರಿತರನದಿಂದಾಗಿಯೇ, ನಾನು ಅವರಿಂದ ಅಂತರ ಕಾಯ್ದುಕೊಂಡೆ. ಅದರ ಹೊರತಾಗಿ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿರಲಿಲ್ಲ ಮತ್ತು ನಾನು ಅವರ ಮೂರನೆಯ ಗಂಡ ಅಲ್ಲ' ಎಂದು ರಾಬರ್ಟ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ವನಿತಾ ವಿಜಯಕುಮಾರ್ ಮತ್ತು ಪೀಟರ್ ಪೌಲ್ ಅವರ ಮದುವೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದ್ದು, ನಾಳೆ ಯಾವ ರೂಪ ಪಡೆಯುತ್ತದೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net