

ನವದೆಹಲಿ: ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಅವರನ್ನು ಮದುವೆಯಾಗಿರುವ ನಟ ರಿತೇಶ್ ದೇಶ್ಮುಖ್ ಲಾಕ್ಡೌನ್ ಅವಧಿಯಲ್ಲಿ ತಮ್ಮ ದಾಂಪತ್ಯದ ತಮಾಷೆಯ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಅಭಿಮಾನಿಗಳನ್ನು ಸಂತೈಸುತ್ತಿದ್ದಾರೆ.
ಇದೀಗ ಅವರು ಪ್ರತಿಯೊಬ್ಬರ ವೈವಾಹಿಕ ಜೀವನ ನೆಮ್ಮದಿ ಹಾಗೂ ಸುಖಮಯವಾಗಿ ಇರಬೇಕೆಂದರೆ ಏನು ಮಾಡಬೇಕು ಎಂಬ ಸಲಹೆಯೊಂದಿಗೆ ಸಣ್ಣದೊಂದು ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ.
ಈ ವಿಡಿಯೋ ತುಣುಕಿನಲ್ಲಿ ರಿತೇಶ್ ಸೋಫಾದ ಮೇಲೆ ಕುಳಿತಿದ್ದರೆ, ಜೆನಿಲಿಯಾ ಮಲಗಿಕೊಂಡು ಕಾಲನ್ನು ಪತಿಯ ಮೇಲೆ ಹಾಕಿದ್ದಾರೆ. ರಿತೇಶ್ ಪತ್ನಿಯ ಕಾಲನ್ನು ಒತ್ತುತ್ತಿದ್ದಾರೆ. ಜತೆಗೆ, ವೈವಾಹಿಕ ಜೀವನ ನೆಮ್ಮದಿಯ ಹಾಗೂ ಸುಖಮಯವಾಗಿರಬೇಕು ಎಂದರೆ, ಪತಿಯಾದವನು ಪತ್ನಿಯ ಕಾಲುಗಳನ್ನು ಒತ್ತುತ್ತಾ ಆಕೆಯ ಸೇವೆ ಮಾಡಬೇಕು ಎಂದು ಪುಕ್ಕಟ್ಟೆ ಸಲಹೆಯನ್ನೂ ಕೊಟ್ಟಿದ್ದಾರೆ.
ಅವರ ಈ ವಿಡಿಯೋ ತುಣುಕಿನ ಬಗ್ಗೆ ಅವರ ಅಭಿಮಾನಿಗಳಿಂದ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ರಿತೇಶ್ ಮಾತ್ರ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಪತ್ನಿಯ ಸೇವೆ ಮುಂದುವರಿಸಿದ್ದಾರಂತೆ!