ವೈರಲ್ ಆಯ್ತು ರಿಷಿ ಕಪೂರ್ ಮತ್ತು ಇರ್ಫಾನ್​ ಖಾನ್​ ಜತೆಗೆ ಇರುವ ಒಂದು ಫೋಟೊ!

Rishi and irfan 30 APR 20
Published on

ಮುಂಬೈ: ಬಾಲಿವುಡ್​ ಗೆ ಬೆನ್ನುಬೆನ್ನಿಗೆ ಆಘಾತ ಎರಗಿದ್ದು, ಬುಧವಾರ ಜನಪ್ರಿಯ ನಟ ಇರ್ಫಾನ್​ ಖಾನ್ ಅಸ್ತಂಗತರಾದರೆ, ಗುರುವಾರ ಹಿರಿಯ ನಟ ರಿಷಿ ಕಪೂರ್​ ಕೊನೆಯುಸಿರೆಳೆದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸಾಮಾಜಿಕ ತಾಣದಲ್ಲಿ ಇವರಿಬ್ಬರೂ ಜತೆಗೆ ಇರುವ ಒಂದು ಫೋಟೊ ವೈರಲ್ ಆಗಿದೆ.

ಹಿಂದಿ ಸಿನಿಮಾ ಇಂಡಸ್ಟ್ರಿಗೆ ಭಾರಿ ಆಘಾತ ನೀಡಿರುವ ಈ ಎರಡು ಘಟನೆಗಳಿಗೆ ಸಾರ್ವಜನಿಕವಾಗಿ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಇಬ್ಬರೂ ಹೆಚ್ಚು ಕಡಿಮೆ ಜತೆಜತೆಗೇ ಕೊನೆಯುಸಿರೆಳೆದ ಕಾರಣ, 2013ರಲ್ಲಿ ತೆರೆ ಕಂಡ ಡಿ-ಡೇ ಚಿತ್ರದ ಫೋಟೊ ವೈರಲ್​ ಆಗಿದೆ. ಈ ಫೋಟೋದಲ್ಲಿ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಜತೆಗೆ ಪ್ರಯಾಣಿಸುತ್ತಿರುವ ದೃಶ್ಯವಿದೆ. ಇಬ್ಬರೂ ಜತೆಯಾಗಿ ಪ್ರಯಾಣಿಸುವ ದೃಶ್ಯ ಈಗಿನ ಸನ್ನಿವೇಶದ ಪ್ರತೀಕವಾಗಿ ಬಳಸಲ್ಪಡುತ್ತಿದೆ.

ಡಿ-ಡೇ ಸಿನಿಮಾವನ್ನು ನಿಖಿಲ್ ಆಡ್ವಾಣಿ ನಿರ್ದೇಶಿಸಿದ್ದು ಅದರಲ್ಲಿ ರಿಷಿ ಕಪೂರ್​ ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್ ಆಗಿಯೂ ಇರ್ಫಾನ್ ಖಾನ್​ ಅಂಡರ್ ಕವರ್ ಇಂಟೆಲಿಜೆನ್ಸ್ ಆಫೀಸರ್ ಆಗಿಯೂ ಅಭಿನಯಿಸಿದ್ದಾರೆ.

ರಿಷಿ ಕಪೂರ್​ ಅವರ ಕುಟುಂಬ ಇಂದು ಬೆಳಗ್ಗೆ 8.45ಕ್ಕೆ ಮೃತಪಟ್ಟಿರುವುದನ್ನು ಘೋಷಿಸಿತ್ತು. ಎರಡು ವರ್ಷಗಳಿಂದ ಅವರು ಲುಕೇಮಿಯಾ ಸಮಸ್ಯೆಯಿಂದ ಬಳಲಿದ್ದರು. ಕೊನೇ ಕ್ಷಣದ ತನಕವೂ ಅವರು ಡಾಕ್ಟರ್​ಗಳು ಮತ್ತು ವೈದ್ಯ ಸಿಬ್ಬಂದಿಯನ್ನು ಮನರಂಜಿಸುತ್ತಲೇ ಇದ್ದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರೂ ಸಿನಿಮಾ ಮೇಲಿನ ಅವರ ಆಸ್ಥೆ ಕಡಿಮೆಯಾಗಿರಲಿಲ್ಲ ಅಲ್ಲದೆ, ಅವರನ್ನು ಯಾರೇ ಭೇಟಿ ಮಾಡಿದರೂ ಬಹಳಷ್ಟು ವಿಷಯಗಳನ್ನು ಮಾತನಾಡುತ್ತಿದ್ದರು. ಅಪ್ಪಿ ತಪ್ಪಿಯೂ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net