

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ವಣದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತನ್ನ ವಿಶೇಷತೆಗಳಿಂದ ಹೇಗೆ ಸಿನಿರಸಿಕರ ಮನಸೆಳೆದಿದೆಯೋ, ಚಿತ್ರದ ಪಾತ್ರಗಳು ಕೂಡ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೇ ಉಳಿದಿವೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯಿಸಿದ್ದ ‘ಕೌಬಾಯ್ ಕೃಷ್ಣ’ನ ಪಾತ್ರಕ್ಕಂತೂ ಜನ ಮನಸೋತಿದ್ದಾರೆ.
ಸ್ಪೆಷಲ್ ಗೆಟಪ್ನಲ್ಲಿ ಯಾವುದೇ ಸಂಭಾಷಣೆ ಇಲ್ಲದೆ ಕೆಲವೇ ಕೆಲವು ದೃಶ್ಯಗಳಲ್ಲಷ್ಟೇ ಬಂದುಹೋದರೂ ಆ ಪಾತ್ರ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ಆ ಪಾತ್ರಕ್ಕೆ ಸಿಕ್ಕ ಜನಪ್ರಿಯತೆಯನ್ನೇ ಅವಕಾಶವಾಗಿ ಬಳಸಿಕೊಳ್ಳಲು ರಿಷಬ್ ಮುಂದಾಗಿದ್ದು, ‘ಕೌಬಾಯ್ ಕೃಷ್ಣ’ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಹಕ್ಕು ಪಡೆದುಕೊಂಡಿದ್ದಾರೆ. ಹಾಗಂತ ರಿಜಿಸ್ಟರ್ ಮಾಡಿಸಿದ್ದೊಂದೇ ವಿಶೇಷ ಅಲ್ಲ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಜತೆ ‘..ನಾರಾಯಣ’ನಿಗೆ ಬಂಡವಾಳ ಹೂಡಿರುವ, ಎಚ್.ಕೆ.ಪ್ರಕಾಶ್ ‘ಕೌಬಾಯ್ ಕೃಷ್ಣ’ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಿವೆ. ಎಲ್ಲ ಅಂದು ಕೊಂಡಂತೆ ಆದರೆ 2021ಕ್ಕೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ನಿರ್ದೇಶನ ರಿಷಬ್ ಅವರೇ ಮಾಡಲಿದ್ದಾರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಸದ್ಯ ರಿಷಬ್ ‘ರುದ್ರಪ್ರಯಾಗ’ ಚಿತ್ರದತ್ತ ಗಮನ ಹರಿಸಿದ್ದಾರೆ. ‘ಆಂಟಗೋನಿ ಶೆಟ್ಟಿ’, ‘ಮಹನಿಯರೇ ಮಹಿಳೆಯರೇ’ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ‘ಬೆಲ್ ಬಾಟಂ 2’ ಸೀಕ್ವೆಲ್ ಸದ್ಯಕ್ಕೆ ಪ್ರಶ್ನೆ ಆಗಿಯೇ ಉಳಿದಿದೆ.