'RRR' ನಂತರ ಆಸ್ಕರ್​ಗೆ 'ಕಾಂತಾರ'; ಗುಡ್​ನ್ಯೂಸ್​ಗಾಗಿ ಕಾಯುತ್ತಿದೆ ಚಿತ್ರತಂಡ

Kantara - Tulu
Published on

ಮುಂಬೈ: ಆಸ್ಕರ್​ ಪ್ರಶಸ್ತಿ ಕಣದಲ್ಲಿ ತೆಲುಗಿನ 'RRR' ಚಿತ್ರವಿರುವುದು, ಹಲವು ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಕನ್ನಡದ 'ಕಾಂತಾರ' ಚಿತ್ರವು ಆಸ್ಕರ್​ ಪರಿಗಣನೆಗೆ ಕಳಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್​​ ಕಿರಗಂದೂರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಾವು ನಮ್ಮ ಚಿತ್ರವನ್ನು ಆಸ್ಕರ್ ಕಣಕ್ಕೆ ಕಳಿಸಿದ್ದೇವೆ. ಆದರೆ, ಇನ್ನೂ ನಾಮಿನೇಷನ್​ ಬಂದಿಲ್ಲ. ಸದ್ಯದಲ್ಲೇ ಯಾವ್ಯಾವ ವಿಭಾಗಕ್ಕೆ ಚಿತ್ರವು ನಾಮನಿರ್ದೇಶನವಾಗಲಿದೆ ಎಂದು ಗೊತ್ತಾಗಲಿದೆ. 'ಕಾಂತಾರ' ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ, ಆಸ್ಕರ್​ನಲ್ಲೂ ಒಳ್ಳೆಯ ಪ್ರಾತಿನಿಧ್ಯ ಸಿಗಬಹುದು ಎಂಬ ನಂಬಿಕೆ ಇದೆ' ಎನ್ನುತ್ತಾರೆ ಅವರು.

'ಕಾಂತಾರ 2' ಚಿತ್ರ ಆಗುತ್ತಿರುವುದನ್ನು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿರುವ ಅವರು, ''ಕಾಂತಾರ' ಚಿತ್ರಕ್ಕೆ ಸಿಕ್ಕ ಯಶಸ್ಸು ಮತ್ತು ಪ್ರೋತ್ಸಾಹ, 'ಕಾಂತಾರ 2' ಮಾಡಲು ಪ್ರೇರೇಪಿಸಿದೆ. ಅದು "ಕಾಂತಾರ'ದ ಮುಂದುವರೆದ ಭಾಗವೂ ಇರಬಹುದು ಅಥವಾ ಆ ಕಥೆಗಿಂತ ಹಿಂದಿನ ಕಥೆಯೂ ಇರಬಹುದು. ರಿಷಭ್​ ಜತೆಗೆ ಕೂತು ಚರ್ಚೆ ನಡೆಸಿ, ಮುಂದಿನ ಕೆಲವು ತಿಂಗಳಲ್ಲಿ ಅಧಿಕೃತವಾಗಿ ಘೋಷಿಸುತ್ತೇವೆ. 'ಕಾಂತಾರ 2' ಚಿತ್ರ ಆಗುತ್ತಿರುವುದು ಹೌದು. ಆದರೆ, ಇಂಥದ್ದೇ ಸಮಯದಲ್ಲಿ ಬರಲಿದೆ ಎಂದು ಹೇಳುವುದು ಕಷ್ಟ. ನಾವು ಯಾವುದೇ ಟೈಮ್​ಲೈನ್​ ಹಾಕಿಕೊಂಡಿಲ್ಲ. ಚಿತ್ರ ಯಾವಾಗ ಬೇಕಾದರೂ ಬರಬಹುದು' ಎಂದು ಅವರು ಹೇಳಿಕೊಂಡಿದ್ದಾರೆ.

ಸೆ.30ರಂದು ಬಿಡುಗಡೆಯಾದ 'ಕಾಂತಾರ' ಚಿತ್ರವು ಜನವರಿಯಲ್ಲಿ 100 ದಿನ ಯಶಸ್ವಿಯಾಗಿ ಪೂರೈಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net