ರಣ್ವಿತ್ ಮೊದಲ ಹುಟ್ಟುಹಬ್ಬಕ್ಕೆ ಸೂಪರ್ ವೀಡಿಯೋ

Rishab Shetty with Ranvit Shetty Final
Published on

ರಿಷಭ್ ಶೆಟ್ಟಿ ಸಖತ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಇಂದು ಅವರ ಮಗ ರಣ್ವಿತ್‌ನ ಮೊದಲ ಹುಟ್ಟುಹಬ್ಬ. ಈ ಹುಟ್ಟುಹಬ್ಬದಂದು ಮಗನಿಗೆ ಹೊಸ ವೀಡಿಯೋ ಗಿಫ್ಟ್​ ಮಾಡಿದ್ದಾರೆ ರಿಷಭ್.

ಕಳೆದ ಒಂದು ವರ್ಷದಲ್ಲಿ ರಣ್ವಿತ್‌ನ ಹಲವು ಫೋಟೋಗಳನ್ನು ತೆಗೆದಿರುವ ರಿಷಭ್, ಈಗ ಅದರಲ್ಲಿ ಕೆಲವು ಆಯ್ದ ಫೋಟೋಗಳನ್ನಿಟ್ಟುಕೊಂಡು ಒಂದು ವೀಡಿಯೋ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಅವರದ್ದೇ ನಿರ್ಮಾಣದ ‘ಕಥಾ ಸಂಗಮ’ ಚಿತ್ರದ ‘ಇರುಳ ಚಂದಿರನು ...’ ಹಾಡನ್ನು ಬಳಸಿಕೊಳ್ಳಲಾಗಿದೆ. ಇನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದ ಪ್ರತೀಕ್ ಶೆಟ್ಟಿ, ಈ ವೀಡಿಯೋ ಎಡಿಟ್ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ತಮ್ಮ ಊರಿನಲ್ಲಿರುವ ರಿಷಭ್, ‘ವಿಜಯವಾಣಿ’ಯೊಂದಿಗೆ ಮಾತನಾಡಿ ಮಗನ ಹುಟ್ಟುಹಬ್ಬದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡರು. ‘ಕಳೆದ ಎರಡ್ಮೂರು ದಿನಗಳಿಂದ ಈ ವೀಡಿಯೋ ಮಾಡಿದ್ದೇವೆ. ರಣ್ವಿತ್‌ನ ಫೋಟೋಗಳನ್ನಿಟ್ಟುಕೊಂಡು, ಅವನು ಈ ಒಂದು ವರ್ಷದಲ್ಲಿ ಬೆಳೆದು ಬಂದ ಹಾದಿಯನ್ನು ತೋರಿಸಲಾಗಿದೆ. ಪ್ರತೀಕ್ ಶೆಟ್ಟಿ ಎಡಿಟ್ ಮಾಡಿದ್ದಾರೆ. ಇನ್ನು ಈ ಮೂಡ್‌ಗೆ ‘ಇರುಳ ಚಂದಿರನು ...’ ಹಾಡು ಚೆನ್ನಾಗಿ ಸೂಟ್ ಆಗುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸಿಕೊಂಡಿದ್ದೇವೆ’ ಎಂದು ವಿವರ ಕೊಡುತ್ತಾರೆ ರಿಷಭ್.

ಇನ್ನು ಇಂದು ಸಂಜೆ, ಮನೆಯ ತೋಟದಲ್ಲೇ ಮೆನಯವರೆಲ್ಲಾ ಸೇರಿ ರಣ್ವಿತ್ ಹುಟ್ಟುಹಬ್ಬವನ್ನು ಪುಟ್ಟದಾಗಿ ಆಚರಿಸಬೇಕು ಎಂದು ಯೋಚಿಸಿದ್ದಾರಂತೆ. ‘ಮನೆಯಲ್ಲೇ ಒಂದು ಕೇಕ್ ಮಾಡಿ, ನಮ್ಮ ತೋಟದಲ್ಲಿ ಅವನ ಹುಟ್ಟುಹಬ್ಬವನ್ನು ಸಂಜೆ ಆಚರಿಸುವ ಯೋಚನೆ ಇದೆ’ ಎನ್ನುತ್ತಾರೆ ರಿಷಭ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net