'ನೀವು ಒಂದ್ ಸಲ ಹೊಗಳಿದ್ರೆ ...'; ರಜನಿಕಾಂತ್​ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್​

Rishab Shetty - Rajanikanth Final
Published on

ಚೆನ್ನೈ: 'ಕಾಂತಾರ' ಚಿತ್ರವನ್ನು ನೋಡಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​, ಆ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಅದಕ್ಕೆ ರಿಷಭ್​ ಧನ್ಯವಾದಗಳನ್ನು ಸಹ ಸಲ್ಲಿಸಿದ್ದರು. ಈಗ ರಿಷಭ್​, ರಜನಿಕಾಂತ್​ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಅವರ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದಾರೆ.

ಇತ್ತೀಚೆಗಷ್ಟೇ 'ಕಾಂತಾರ' ಚಿತ್ರವನ್ನು ರಜನಿಕಾಂತ್​ ವೀಕ್ಷಿಸಿ, ಸೋಷಿಯಲ್​ ಮೀಡಿಯಾದಲ್ಲಿ ಅದರ ಕುರಿತು ಮೆಚ್ಚಿ ಮಾತನಾಡಿದ್ದರು. 'ನಮಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ರಿಷಭ್​ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರ ತೋರಿಸಿಕೊಟ್ಟಿದೆ. ಚಿತ್ರ ನೋಡಿ ಖುಷಿಯಾಯಿತು. ಇಂಥದ್ದೊಂದು ಚಿತ್ರ ರೂಪಿಸಿದ ರಿಷಭ್​ಗೆ ಹ್ಯಾಟ್ಸ್​ ಆಫ್​. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಒಂದು ಮಾಸ್ಟರ್​ಪೀಸ್​' ಎಂದು ಹೊಗಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಿಷಭ್​, 'ಇಡೀ ಭಾರತದಲ್ಲೇ ನೀವು ದೊಡ್ಡ ಸೂಪರ್​ ಸ್ಟಾರ್​. ನಾನು ಬಾಲ್ಯದಿಂದಲೂ ನಿಮ್ಮ ದೊಡ್ಡ ಅಭಿಮಾನಿ. ನಿಮ್ಮಿಂದ ಮೆಚ್ಚುಗೆ ಪಡೆದಿರುವುದು ನನ್ನ ಕನಸು ನನಸಾದಂತಾಗಿದೆ. ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡುವುದಕ್ಕೆ ನಿಮ್ಮ ಮಾತು ಸ್ಫೂರ್ತಿ ತುಂಬಿದೆ' ಎಂದು ಹೇಳಿಕೊಂಡಿದ್ದರು.

ಈಗ ರಿಷಭ್, ರಜನಿಕಾಂತ್​ ಅವರನ್ನು ಚೆನ್ನೈ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮುಂತಾದವರು ಹಾಜರಿದ್ದರು.

ಈ ಭೇಟಿಯ ನಂತರ ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಿಷಭ್​, 'ನೀವು ಒಂದ್ ಸಲ ಹೊಗಳಿದ್ರೆ ... ನೂರು ಸಲ ಹೊಗಳ್ದ೦ಗೆ ನಮಗೆ. ನಮ್ಮ 'ಕಾಂತಾರ' ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ' ಎಂದು ಬರೆದುಕೊಂಡಿದ್ದಾರೆ.

ಕಳೆದ ಸೆ. 30ರಂದು ಬಿಡುಗಡೆಯಾಗಿದ್ದ 'ಕಾಂತಾರ' ಚಿತ್ರವು ನಾಲ್ಕು ವಾರಗಳ ನಂತರವೂ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಇದುವರೆಗೂ ಬಾಕ್ಸ್​-ಆಫೀಸ್​ನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net