

ಬೆಂಗಳೂರು: ಡಿಸೆಂಬರ್ ತಿಂಗಳು ಚಿತ್ರರಂಗಕ್ಕೆ ಒಳ್ಳೆಯದು ಎಂಬ ಮಾತಿದೆ. ಹಾಗಾಗಿಯೇ ಈ ತಿಂಗಳಲ್ಲಿ ಸಿನಿಮಾ ಟ್ರಾಫಿಕ್ ತುಸು ಜಾಸ್ತಿನೇ. ಕನ್ನಡ ಮಾತ್ರವಲ್ಲ ಎಲ್ಲ ಭಾಷೆಗಳಲ್ಲಿಯೂ ಸಾಲು ಸಾಲು ಸಿನಿಮಾಗಳು ಪೈಪ್ಲೈನ್ನಲ್ಲಿವೆ. ಅದರಂತೆ ಡಿ.10ಕ್ಕೆ ‘ಅವತಾರ್ ಪುರುಷ’, 23ಕ್ಕೆ ‘ಬಡವ ರಾಸ್ಕಲ್’ ಸಿನಿಮಾ ತೆರೆಗೆ ಬಂದರೆ, ಡಿ. 24ರಂದು ಕ್ರಿಸ್ಮಸ್ ಅಂಗವಾಗಿ ನಿಖಿಲ್ ಕುಮಾರಸ್ವಾಮಿ ಅವರ ‘ರೈಡರ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ನಿಖಿಲ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡು ವರ್ಷಗಳೇ ಆಗಿವೆ. 2019ರಲ್ಲಿ ‘ಸೀತಾರಾಮ ಕಲ್ಯಾಣ’ ಮತ್ತು ‘ಕುರುಕ್ಷೇತ್ರ’ ಚಿತ್ರಗಳು ಬಿಡುಗಡೆಯಾಗಿದ್ದವು. ಆ ನಂತರ ನಿಖಿಲ್ ಒಪ್ಪಿದ್ದು ‘ರೈಡರ್’ ಮಾತ್ರ. ಆ ಚಿತ್ರ ಸಹ ಎರಡನೇ ಲಾಕ್ಡೌನ್ ನಂತರ ಸಂಪೂರ್ಣವಾಗಿದ್ದು, ಇತ್ತೀಚೆಗೆ ಎರಡು ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಪಡೆದಿವೆ. ಈಗ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ನಿಖಿಲ್ಗೆ ನಾಯಕಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದು, ಮಿಕ್ಕಂತೆ ದತ್ತಣ್ಣ, ರಾಜೇಶ್ ನಟರಂಗ, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ‘ಕೆಜಿಎಫ್’ನ ಗರುಡ ಖ್ಯಾತಿಯ ರಾಮಚಂದ್ರ ರಾಜು ಮುಂತಾದವರು ನಟಿಸಿದ್ದಾರೆ. ವಿಜಯ್ ಕುಮಾರ್ ಕೊಂಡಾ ನಿರ್ದೇಶನದ ಈ ಚಿತ್ರವನ್ನು ಚಂದ್ರು ಮನೋಹರನ್ ನಿರ್ವಿುಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.