ಮಾನನಷ್ಟ ಮೊಕದ್ದಮೆ ಹಾಕಿದ್ದು ದುಡ್ಡಿಗಲ್ಲ, ಗೌರವಕ್ಕಾಗಿ ಎಂದ ರಿಚಾ

Payal - Richa - Final
Published on

ಮುಂಬೈ: ಯಾವುದೋ ವಿಷಯದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ತರುವುದರ ಜತೆಗೆ ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಾರೆ ಎಂದು ಪಾಯಲ್​ ಘೋಶ್​ ವಿರುದ್ಧ ರಿಚಾ ಚಡ್ಡಾ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ಪ್ರಕರಣದಲ್ಲಿ ಅಂತಿಮವಾಗಿ ಗೆಲುವು ಸಾಧಿಸಿರುವ ರಿಚಾ, ತಾನು ಕೇಸ್​ ಹಾಕಿದ್ದು ದುಡ್ಡಿಗಲ್ಲ, ಘನತೆ ಮತ್ತು ಗೌರವಗಳನ್ನು ಕಾಪಾಡಿಕೊಳ್ಳುವುದಕ್ಕೆ ಎಂದು ಹೇಳಿದ್ದಾರೆ.

ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ನಟಿ ಪಾಯಲ್​ ಘೋಶ್​ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್​ ಕಶ್ಯಪ್​ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್​ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.

ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದುತಂದಿದ್ದಕ್ಕಾಗಿ ಪಾಯಲ್​ ಮೇಲೆ ಮುಂಬೈ ಹೈಕೋರ್ಟ್​ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದರು. ತಾನು ಯಾವುದೇ ತಪ್ಪು ಮಾಡದಿರುವುದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಾಯಲ್​ ಹೇಳಿಕೊಂಡಿದ್ದರಾದರೂ, ಅಂತಿಮವಾಗಿ ಕ್ಷಮೆ ಕೇಳಿದ್ದಾರೆ.

ಈ ಕುರಿತು ಮಾತನಾಡಿರುವ ರಿಚಾ, 'ಪಾಯಲ್​ ಘೋಶ್​ ಕ್ಷಮೆ ಕೇಳಿದ್ದಾರೆ. ಕೋರ್ಟ್​ನ ಮಾತಿಗೆ ಬೆಲೆ ಕೊಟ್ಟು, ಕೇಸ್​ ವಾಪಸ್ಸು ಪಡೆಯುವುದಕ್ಕೆ ತೀರ್ಮಾನಿಸಿದ್ದೇನೆ. ಹಾಗಂತ ಇನ್ನಿಬ್ಬರ ಮೇಲೆ ಹಾಕಿರುವ ಕೇಸ್​ ಹಿಂದಕ್ಕೆ ಪಡೆಯುತ್ತಿಲ್ಲ. ಏಕೆಂದರೆ, ಕ್ಷಮೆ ಕೇಳುವುದಾಗಿ ಹೇಳಿ ಅವರು ಕ್ಷಮೆ ಕೇಳಿಲ್ಲ' ಎಂದು ಹೇಳಿದ್ದಾರೆ.

ಇನ್ನು ತಾವು ಮಾನನಷ್ಟ ಮೊಕ್ಕದ್ದಮೆ ಹೂಡಿದ್ದು, ಹಣ ಪಡೆಯುವುದಕ್ಕಲ್ಲ, ಬದಲಿಗೆ ತಮ್ಮ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಹೋರಾಟ ಮಾಡಬೇಕಾಯಿತು ಎಂದು ರಿಚಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net