ಲಾಕ್​ಡೌನ್​ ನಂತರ ಗರಿಗೆದರಿದ ಬಾಲಿವುಡ್​ ...

Bollywood - Final
Published on

ಮುಂಬೈ: ಆರು ತಿಂಗಳುಗಳಿಂದ ಕರೊನಾ ಮತ್ತು ಲಾಕ್​ಡೌನ್​ನಿಂದ ಸ್ಥಬ್ಧವಾಗಿದ್ದ ಬಾಲಿವುಡ್​ ಇದೀಗ ಗರಿಗೆದರಿದೆ. ಕರೊನಾ ಭಯದಿಂದ ಚಿತ್ರೀಕರಣಕ್ಕೆ ಹೋಗುವುದೋ ಬೇಡವೋ ಎಂದು ಹೆದರಿದ್ದ ಸ್ಟಾರ್​ನಟರೆಲ್ಲರೂ ಚಿತ್ರೀಕರಣ ಪ್ರಾರಂಭಿಸಿರುವುದಷ್ಟೇ ಅಲ್ಲ, ಕೆಲವರು ಅರ್ಧಂಬರ್ಧ ಆಗಿದ್ದ ಚಿತ್ರಗಳನ್ನು ಸಹ ಮುಗಿಸಿದ್ದಾರೆ.

ಈ ಪೈಕಿ ಮೊದಲು ಹೆಜ್ಜೆ ಇಟ್ಟವರು ಅಕ್ಷಯ್​ ಕುಮಾರ್​. ಆಗಸ್ಟ್​ವರೆಗೂ ಮನೆಯಲ್ಲೇ ಇದ್ದ ಅವರು, ಆಗಸ್ಟ್​​ 10ರಂದು 'ಬೆಲ್​ ಬಾಟಮ್​' ಚಿತ್ರದ ಚಿತ್ರೀಕರಣಕ್ಕೆ ಸ್ಕಾಟ್​ಲ್ಯಾಂಡ್​ಗೆಂದು ಹೊರಟರು. ಸತತ 50 ದಿನಗಳ ಕಾಲ ಅಲ್ಲಿ ಚಿತ್ರೀಕರಣ ಮುಗಿಸಿರುವುದಷ್ಟೇ ಅಲ್ಲ, ಏಪ್ರಿಲ್​ 02ಕ್ಕೆ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದ್ದಾರೆ.

ಅಕ್ಷಯ್​ ಕುಮಾರ್​ ಅಲ್ಲದೆ ಸಲ್ಮಾನ್​ ಖಾನ್​, ಆಮೀರ್​ ಖಾನ್​, ಕಂಗನಾ ರಣಾವತ್​, ದೀಪಿಕಾ ಪಡುಕೋಣೆ, ಅರ್ಜುನ್​ ಕಪೂರ್​, ಶಿಲ್ಪಾ ಶೆಟ್ಟಿ, ಸಂಜಯ್ ದತ್​, ಕರೀನಾ ಕಪೂರ್​ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. 'ತಲೈವಿ' ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಕಂಗನಾ ರಣಾವತ್​ ಭಾಗವಹಿಸಿದ್ದು, ತಮ್ಮ ಭಾಗದ ಬಹುತೇಕ ಕೆಲಸವನ್ನು ಮುಗಿಸಿದ್ದಾರೆ.

ಈ ಪೈಕಿ ಆಮೀರ್​ ಖಾನ್​ ಮತ್ತು ಕರೀನಾ ಕಪೂರ್​ ಅವರು 'ಲಾಲ್​ ಸಿಂಗ್​ ಚಡ್ಢಾ' ಚಿತ್ರೀಕರಣದಲ್ಲಿ ಭಾಗವಹಿಸಿದರೆ, ಅರ್ಜುನ್​ ಕಪೂರ್​ ಹೆಸರಿಡದ ಚಿತ್ರದಲ್ಲಿ, ಶಿಲ್ಪಾ ಶೆಟ್ಟಿ 'ಹಂಗಾಮ 2'ನಲ್ಲಿ ನಟಿಸುತ್ತಿದ್ದಾರೆ.

ಸಲ್ಮಾನ್​ ಖಾನ್​ ಅವರು 'ರಾಧೆ' ಚಿತ್ರದ ಚಿತ್ರೀಕರಣ ಮುಗಿಸಿದರೆ, 'ಶಂಶೇರಾ' ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಸಂಜತ್​ ದತ್​ ಮುಗಿಸಿದ್ದಾರೆ. ಇನ್ನು ಇವರೆಲ್ಲರ ಜತೆಗೆ ಅಕ್ಷಯ್​ ಕುಮಾರ್​, 'ಪೃಥ್ವಿರಾಜ್​' ಚಿತ್ರದ ಎರಡನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಲಾಕ್​ಡೌನ್​ ನಂತರ ಬಾಲಿವುಡ್ ಗರಿಗೆದರಿದ್ದು, ಹೊಸ ಚಿತ್ರಗಳ ಬಿಡುಗಡೆ ಇಲ್ಲದಿದ್ದರೂ, ಒಂದಿಷ್ಟು ಚಿತ್ರಗಳ ಚಿತ್ರೀಕರಣ ಕೆಲಸಗಳು ಸಾಂಗವಾಗಿ ನೆರವೇರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net