

ಬಾಲಿವುಡ್ ನಟಿ ರಿಚಾ ಚಡ್ಡಾ ಅಭಿನಯದ ‘ಶಕೀಲಾ’ ಮತ್ತು ‘ಮೇಡಂ ಚೀಫ್ ಮಿನಿಸ್ಟರ್’ ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ, ಹೆಚ್ಚು ಸುದ್ದಿಯೂ ಆಗಲಿಲ್ಲ. ಒಂದಿಷ್ಟು ಪ್ರಚಾರದೊಂದಿಗೆ ಈ ಎರಡು ಚಿತ್ರಗಳು ಬಿಡುಗಡೆಯಾಗಿದ್ದಷ್ಟೇ ಗೊತ್ತಾಗಿದ್ದು, ಆಮೇಲೇನಾದವೋ ಗೊತ್ತಿಲ್ಲ. ಇದೀಗ ರಿಚಾ ಸದ್ದಿಲ್ಲದೆ ವೆಬ್ ಸರಣಿಯೊಂದರಲ್ಲಿ ಕಾಣಿಸಿಕೊಂಡಿದ್ದು, ಆ ಸರಣಿ ಸದ್ಯದಲ್ಲೇ ಡಿಸ್ನಿ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.
ಅಂದಹಾಗೆ, ರಿಚಾ ಕಾಣಿಸಿಕೊಂಡಿರುವ ವೆಬ್ಸರಣಿಯ ಹೆಸರು ‘ಸಿಕ್ಸ್ ಸಸ್ಪೆಕ್ಟ್ ್ಸ. 2008ರಲ್ಲಿ ಬಿಡುಗಡೆಯಾದ ವಿಕಾಸ್ ಸ್ವರೂಪ್ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಈ ಸರಣಿಯಲ್ಲಿ ರಿಚಾ, ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಒಂದು ಕೊಲೆ ನಡೆದಿದೆ. ಆರು ಜನ ಶಂಕಿತರಿದ್ದಾರೆ. ಈ ಆರರ ಪೈಕಿ ಯಾರು ನಿಜವಾದ ಕೊಲೆಗಾರರು ಮತ್ತು ಯಾವ ಕಾರಣಕ್ಕೆ ಕೊಲೆಯಾಯಿತು ಎಂದು ಪತ್ತೆ ಮಾಡುವುದು ರಿಚಾ ಕೆಲಸ. ಈಗಾಗಲೇ, ಸದ್ದಿಲ್ಲದೆ ಚಿತ್ರೀಕರಣ ಮುಗಿದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸಿರೀಸ್ ಪ್ರಸಾರವಾಗುವುದೊಂದೇ ಬಾಕಿ ಇದೆ. ರಿಚಾ ಜತೆಗೆ ಪ್ರತೀಕ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದು, ತಿಗ್ಮಾನ್ಶು ಧುಲಿಯಾ ಈ ಸರಣಿಯ ನಿರ್ದೇಶನ ಮಾಡಿದ್ದಾರೆ.