ಪಕ್ಕದ್ಮನೆಯವರ ಮೇಲೆ ಕೇಸ್​ ಹಾಕ್ತಾರಂತೆ ರಿಯಾ ಚಕ್ರವರ್ತಿ

Rhea Chakraborty - Final
Published on

ಮುಂಬೈ: ಸುಶಾಂತ್​ ಮತ್ತು ರಿಯಾ ಚಕ್ರವರ್ತಿ ಇಬ್ಬರನ್ನೂ ಜೂನ್​ 13ರಂದು ನೋಡಿದ್ದಾಗಿ, ರಿಯಾ ಪಕ್ಕದ ಮನೆಯ ಡಿಂಪಲ್​ ತವಾನಿ ಎನ್ನುವವರು ಹೇಳಿದ್ದರು. ತಮ್ಮ ವಿರುದ್ಧ ಸುಳ್ಳು ಹೇಳುವುದರ ಜತೆಗೆ, ಕೇಸ್​ ದಿಕ್ಕು ತಪ್ಪಿಸಿದ್ದಿಕ್ಕೆ ಡಿಂಪಲ್​ ವಿರುದ್ಧ ರಿಯಾ ಕೇಸ್ ಹಾಕುತ್ತಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಸುಶಾಂತ್​ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಡಿಂಪಲ್​ ಮಾತನಾಡಿದ್ದರು. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದು ಜೂನ್​ 14ರಂದು. ಅದರ ಮುನ್ನಾ ದಿನ ಅಂದರೆ ಜೂನ್​ 13ರಂದು ಸುಶಾಂತ್​ ಅವರು ರಿಯಾ ಮನೆಗೆ ಬಂದಿದ್ದರು ಮತ್ತು ಅವರಿಬ್ಬರನ್ನು ನೋಡಿದ್ದಾಗಿ ಡಿಂಪಲ್​ ಮಾಧ್ಯಮಗಳೆದುರು ಹೇಳಿಕೊಂಡಿದ್ದರು.

ಈ ವಿಷಯವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಸುಶಾಂತ್​ ಬಂದಿದ್ದನ್ನು ತಾನು ನೋಡಿಯೇ ಇಲ್ಲ ಎಂದು ಡಿಂಪಲ್​ ಹೇಳಿದ್ದಾರೆನ್ನಲಾಗಿದೆ. ಆ ವಿಷಯವನ್ನು ಬೇರೆ ಯಾರೋ ತಮಗೆ ಹೇಳಿದ್ದು, ತಮಗೆ ಈ ವಿಷಯವನ್ನು ಹೇಳಿದ ವ್ಯಕ್ತಿ ಸಹ ಸುಶಾಂತ್​ ಮತ್ತು ರಿಯಾ ಒಟ್ಟಿಗೆ ಇದ್ದುದನ್ನು ನೋಡಿಲ್ಲ ಎಂದು ಒಪ್ಪಿಕೊಂಡಿದ್ದಾರಂತೆ.

ಡಿಂಪಲ್​ ತನಿಖೆಯ ಹಾದಿಯನ್ನು ಬೇರೆಡೆ ತಿರುಗಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೀಗೆ ಮಾಧ್ಯಮದವರ ಎದುರು ಬೇಕಾಬಿಟ್ಟಿ ಮಾತನಾಡಬಾರದು ಎಂದು ಹೇಳಿ ಕಳುಹಿಸಿದ್ದಾರಂತೆ.

ಈ ಮಧ್ಯೆ, ರಿಯಾ ಸಹ ಡಿಂಪಲ್​ ವಿರುದ್ಧ ಕೇಸ್​ ಹಾಕಲಿದ್ದಾರೆ ಎಂದು ಆಕೆಯ ಪರ ವಕೀಲ ಸತೀಶ್​ ಮಾನಶಿಂಧೆ ಹೇಳಿದ್ದಾರೆ. ತಮ್ಮನ್ನು ತೇಜೋವಧೆ ಮಾಡುವುದರ ಜತೆಗೆ, ಸುಳ್ಳು ಸುದ್ದಿ ಹೇಳುವ ಮೂಲಕ ತಮ್ಮ ಮುಖಕ್ಕೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಾರೆ ಎಂದು ರಿಯಾ, ಡಿಂಪಲ್​ ವಿರುದ್ಧ ಸದ್ಯದಲ್ಲೇ ಕೇಸು ಹಾಕುತ್ತಾರೆ ಎಂದು ಸತೀಶ್ ಮಾಧ್ಯಮದವರೆದುರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net