

ಬೆಂಗಳೂರು: 'ಆರ್ಎಕ್ಸ್ 100' ಗೊತ್ತು. ಆದರೆ, 'ಆರ್ಎಚ್ 100' ಗೊತ್ತಾ? ಗೊತ್ತಾಗಬೇಕಿದ್ದರೆ ಮುಂದಿನ ವಾರದವರೆಗೂ ಕಾಯಬೇಕು. ಏಕೆಂದರೆ, 'ಆರ್ಎಚ್ 100' ಹೆಸರಿನ ಸಿನಿಮಾ ಮುಂದಿನ ವಾರ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಡೆಯಾಗಿದೆ.
'ಆ್ಯಕ್ಟ್ 1978' ಚಿತ್ರದ ನಿರ್ಮಾಪಕ ದೇವರಾಜ್ ಆರ್, ನಿರ್ದೇಶಕ ಹರಿ ಸಂತು, ನಟ ಚೇತನ್ ರಾಜ್ ಅತಿಥಿಗಳಾಗಿ ಆಗಮಿಸಿ, ಟ್ರೇಲರ್ ಬಿಡುಗಡೆ ಮಾಡಿದರು. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ಶುಭ ಕೋರಿದರು. ಈಗಾಗಲೇ 'ಆ್ಯಕ್ಟ್ 1978' ಸಿನಿಮಾ ಮತ್ತು 'ಅರಿಷಡ್ವರ್ಗ' ಸೇರಿ ಹಲವು ಹೊಸ ಸಿನಿಮಾಗಳು ಚಿತ್ರಮಂದಿರದಲ್ಲಿವೆ. ಇದೀಗ 'ಆರ್.ಎಚ್ 100' ಸಿನಿಮಾ ಸಹ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.
ಎಸ್.ಎಲ್.ಎಸ್ ಪ್ರೊಡಕ್ಷನ್ಸ್ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ ‘ಆರ್ಎಚ್ 100’ ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಒಟ್ಟು 38 ದಿನಗಳ ಕಾಲ ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಮನೋಜ್ ಹಾಗೂ ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ ಹಾಗೂ ಕುಂಫ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಣೇಶ್, ಹರ್ಷ. ಚಿತ್ರ, ಕಾವ್ಯ, ಸೋಮ್ ಸುಹಿತ್ ಮುಂತಾದವರು ಚಿತ್ರದಲ್ಲಿದ್ದಾರೆ.