

ಸಿನಿಮಾ ಇಂಡಸ್ಟ್ರಿ ಬಣ್ಣದ ಮಾಯೆ ಎಂಬುದು ಎಲ್ಲರಿಗೂ ಗೊತ್ತು. ತೆರೆಮೇಲಷ್ಟೇ ಅದು ಚೆಂದ ಎಂಬ ಕಡು ಸತ್ಯವನ್ನು ಎಲ್ಲರೂ ಅರಿತಿದ್ದಾರೆ. ಇಲ್ಲಿ ಗೆಲುವಿನ ಜತೆಗೆ ಸೋಲನ್ನೂ ಸಂಭ್ರಮಿಸುವವರಿದ್ದಾರೆ. ಎದುರಿಗೆ ಆಲ್ ದಿ ಬೆಸ್ಟ್ ಎಂದವರು, ಅವರ ಹಿಂದೆ ಸಿನಿಮಾ ಸೋಲಲಿ ಎಂದು ಬಯಸುವವರೂ ಕಾಣಸಿಗುತ್ತಾರೆ. ಇದೀಗ ಇದೇ ವಿಚಾರ ರಾಜಮೌಳಿಯ ‘ಆರ್ಆರ್ಆರ್’ ಚಿತ್ರಕ್ಕೂ ಎದುರಾಗಿದೆ. ಟಾಲಿವುಡ್ನ ಮೋಸ್ಟ್ ಕಾಂಟ್ರವರ್ಸಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಅಂತ ಒಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಆರ್ಜಿವಿ ನಿರ್ದೇಶನದ ನೀಲಿ ತಾರೆ ಮಿಯಾ ಮಲ್ಕೋವಾ ಮುಖ್ಯಭೂಮಿಕೆಯಲ್ಲಿರುವ ‘ಕ್ಲೈಮ್ಯಾಕ್ಸ್‘ ಚಿತ್ರದ ಆನ್ಲೈನ್ ಸಂದರ್ಶನವೊಂದರಲ್ಲಿ ರಾಜಮೌಳಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆರ್ಜಿವಿ ಹೇಳಿಕೆ ನೀಡಿರುವ ವಿಚಾರ ಕೇವಲ ಅವರೊಬ್ಬರ ದೃಷ್ಟಿಕೋನದಲ್ಲಿ ಬಿಂಬಿತವಾದ ಹೇಳಿಕೆಯಲ್ಲ. ಎಲ್ಲ ನಿರ್ದೇಶಕರು, ಸಿನಿಮಾ ಕಲಾವಿದರು ಹೇಳಿಕೊಳ್ಳುವ ಮಾತದು ಎಂದಿದ್ದಾರೆ. ಹಾಗಾದರೆ ಆರ್ಜಿವಿಯ ಆ ಕಾಂಟ್ರವರ್ಸಿ ಹೇಳಿಕೆ ಏನದು?
‘ರಾಜಮೌಳಿಯ ಯಶಸ್ಸನ್ನು ಸಹಿಸದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರಿದ್ದಾರೆ. ಸರಣಿ ಸೂಪರ್ ಹಿಟ್ ಸಿನಿಮಾ ನೀಡಿರುವ ಅವರ ಕೆಲಸವನ್ನು, ಪಾಪ್ಯುಲಾರಿಟಿಯನ್ನು ಕಂಡು ಹೊಟ್ಟೆಕಿಚ್ಚು ಪಡುವವರೇ ಹೆಚ್ಚು. ಅವರ ಆ ಯಶಸ್ಸನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಒಂದು ವೇಳೆ ಆರ್ಆರ್ಆರ್ ಸಿನಿಮಾ ಸೋತರೆ, ರಸ್ತೆಗಿಳಿದು, ಕೈಯಲ್ಲಿ ಶಾಂಪೇನ್ ಹಾರಿಸಿ ಸಂಭ್ರಮಿಸುವವರೇ ಹೆಚ್ಚಿದ್ದಾರೆ. ಇದೇ ವಾಸ್ತವ!’ ಎಂದಿರುವ ರಾಮ್ಗೋಪಾಲ್ ವರ್ಮಾ, ಈ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ನೇರವಾಗಿ ಹೇಳಿಲ್ಲ. (ಏಜೆನ್ಸೀಸ್)