

ಸುಶಾಂತ್ ಸಿಂಗ್ ಸಾವಿನಿಂದ ಇಡೀ ಬಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಆಗಾಗ ಕೇಳಿ ಬರುತ್ತಿದ್ದ ನೆಪೋಟಿಸಂ ಎಂಬ ಪದ, ಕಳೆದ ಮೂರು ದಿನಗಳಿಂದ ಬಾಲಿವುಡ್ನಲ್ಲಿ ವಿಪರೀತವಾಗಿ ಕೇಳಿ ಬರುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ವಿಪರೀತ ಇದ್ದು, ಕರಣ್ ಜೋಹಾರ್ ಮುಂತಾದ ಜನಪ್ರಿಯ ನಿರ್ದೇಶಕರು ಅದನ್ನು ಪೋಷಿಸುತ್ತಿದ್ದಾರೆ. ಇದರಿಂದಾಗಿಯೇ ಸುಶಾಂತ್ರಂತಹ ಕಲಾವಿದರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂಬ ವಾದ ಕೇಳಿ ಬರುತ್ತಿದೆ.
ಇದನ್ನೂ ಓದಿ: ಸುಶಾಂತ್ ಸಾವಿಗೆ ಕರಣ್, ಆಲಿಯಾ ದೂಷಿಸುವುದು ಮೂರ್ಖತನ
ಈಗಾಗಲೇ ಇದು ಸುಳ್ಳು ಎಂದು ಹಲವರು ಪ್ರತಿಪಾದಿಸಿರುವುದಷ್ಟೇ ಅಲ್ಲ, ಕರಣ್ ಜೋಹಾರ್ ಪರವಾಗಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಿಂತಿದ್ದಾರೆ. ಈಗ ಆ ಸಾಲಿಗೆ ರಾಮ್ಗೋಪಾಲ್ ವರ್ಮಾ ಸಹ ಸೇರಿಕೊಂಡಿದ್ದಾರೆ. ಕರಣ್ ಜತೆಗೆ ಆಗಾಗ ಮುಸುಕಿನ ಗುದ್ದಾಟ ಮಾಡುತ್ತಲೇ ಇರುವ ವರ್ಮಾ ಸಹ ಪರವಾಗಿ ನಿಂತಿರುವುದಷ್ಟೇ ಅಲ್ಲ, ಬಾಲಿವುಡ್ ಹೇಗೆ ಕೆಲಸ ಮಾಡುತ್ತದೆ ಎಂದು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ಗಳನ್ನು ವರ್ಮಾ ಮಂಗಳವಾರದಿಂದ ಮಾಡುತ್ತಲೇ ಬಂದಿದ್ದಾರೆ.
ಸುಶಾಂತ್ ಸಾವಿಗೆ ಎಲ್ಲರೂ ಕರಣ್ ಜೋಹಾರ್ ಅವರನ್ನು ದೂಷಿಸುತ್ತಿರುವುದು, ಚಿತ್ರರಂಗದ ಬಗ್ಗೆ ಅವರ ತಿಳುವಳಿಕೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಒಂದು ಪಕ್ಷ, ಕರಣ್ಗೆ ಸುಶಾಂತ್ ಜತೆಗೆ ಏನಾದರೂ ಸಮಸ್ಯೆ ಇದ್ದರೂ, ಅದು ವೈಯಕ್ತಿಕ. ಅವರು ಯಾರ ಜತೆಗೆ ಕೆಲಸ ಮಾಡಬೇಕು, ಯಾರ ಜತೆಗೆ ಮಾಡಬಾರದು ಎಂಬುದು ಅವರಿಗೆ ಬಿಟ್ಟಿದ್ದು. ಸುಶಾಂತ್ ಜತೆಗೆ ಕರಣ್ ಕೆಲಸ ಮಾಡಲಿಲ್ಲ ಎಂದ ಮಾತ್ರಕ್ಕೆ ಅವರನ್ನು ದೂಷಿಸುವುದು ಸರಿಯಲ್ಲ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೂ ಸುಶಾಂತ್ ನಿನ್ನೆ, ಮೊನ್ನೆ ಬಂದ ಹುಡುಗನಲ್ಲ. ಕಳೆದ 12 ವರ್ಷದಿಂದ ಸಾಕಷ್ಟು ಜನಪ್ರಿಯತೆ, ಹಣ, ಯಶಸ್ಸು ಎಲ್ಲವನ್ನೂ ನೋಡಿದ್ದಾರೆ. ಅವರನ್ನೇ ಹೊಸಬರು ಅಥವಾ ಹೊರಗಿನವರು ಎಂದು ಕರೆದರು, ಅವರಷ್ಟೂ ಹೆಸರು ಮಾಡದ ಜನರಿಗೆ ಏನನ್ನಬೇಕು. ಸುಶಾಂತ್ ಹತ್ತಿರಕ್ಕೂ ಎಷ್ಟೋ ಜನ ಉದಯೋನ್ಮುಖ ಕಲಾವಿದರಿಗೆ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಅವರೆಲ್ಲಾ ಆತ್ಮಹತ್ಯೆ ಮಾಡಿಕೊಂಡರೆ, ದಿನಕ್ಕೆ 100 ಜನ ಆತ್ಮಹತ್ಯ ಮಾಡಿಕೊಳ್ಳಬೇಕಾಗುತ್ತದೆ. ಇರುವುದರಲ್ಲಿ ಖುಷಿಪಡುವುದಕ್ಕೆ ಸಾಧ್ಯವಿಲ್ಲ ಎಂದರೆ, ನಾವು ಯಾವತ್ತೂ ಖುಷಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬಾಲಿವುಡ್ನಲ್ಲಿ ಇರುವವರೆಲ್ಲಾ ಒಳಗಿನವರೇನಲ್ಲ. ಅವರು ಯಾವತ್ತೋ ಒಂದು ದಿನ ಹೊರಗಿನವರಾಗಿದ್ದವರು. ಅಮಿತಾಭ್ ಬಚ್ಚನ್ರಿಂದ ಹಿಡಿದು ಕರಣ್ ಜೋಹಾರ್ವರೆಗೂ ಹಲವು ಸೆಲೆಬ್ರಿಟಿಗಳು ಚಿತ್ರರಂಗದಲ್ಲಿ ಇದ್ದಾರೆ ಎಂದರೆ, ಅವರು ಒಳಗಿನವರು, ಅವರಿಗೆ ಗಾಡ್ಫಾದರ್ಗಳಿದ್ದಾರೆ ಎಂದರರ್ಥವಲ್ಲ. ಅವರೆಲ್ಲಾ ಕಷ್ಟಪಟ್ಟು ಮೇಲೆ ಬಂದವರು. ಅವರ ಸಿನಿಮಾಗಳನ್ನು ಕೋಟ್ಯಂತರ ಜನ ನೋಡಿದ್ದಾರೆ. ಅವರು ಸಾಕಷ್ಟು ಸೋಲು, ನಷ್ಟ ಕಂಡಿದ್ದಾರೆ. ಹಾಗೆ ನೋಡಿದರೆ, ಇಲ್ಲಿ ಹೊರಗಿನವರು ಕಷ್ಟಪಟ್ಟಿರುವುದಕ್ಕಿಂತ, ಒಳಗಿನವರು ಕಷ್ಟಪಟ್ಟಿದ್ದೇ ಹೆಚ್ಚು ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.