ರೆಹಮಾನ್​ ಇಂಥಾ ಚಿಲ್ಲರೆ ರಾಜಕೀಯವನ್ನ ಮೀರಿ ಬೆಳೆದಿದ್ದಾರೆ ಅಂತಾರೆ ರೆಸೂಲ್​

Resool Pookutty - Final
Published on

ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಗ್ಯಾಂಗ್​ಗಳು, ಸ್ವಜನಪಕ್ಪಪಾತ, ಗ್ರೂಪಿಸಂ ... ವಿಪರೀತ ಹೆಚ್ಚಾಗುತ್ತಿದೆ ಎಂದು ಕಂಗನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಸರಿಯಾಗಿ, ತಮಗೂ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎಂದು ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.

ರೆಹಮಾನ್​ ಈ ವಿಷಯವನ್ನು ಹೇಳುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ಶೇಖರ್​ ಕಪೂರ್​, ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್​ ಡಿಸೈನರ್​ ರೆಸೂಲ್​ ಪೂಕ್ಕುಟ್ಟಿ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು 'ಆಸ್ಕರ್​ ಶಾಪ' ಎಂದು ಹಿರಿಯ ನಿರ್ದೇಶಕ ಶೇಖರ್​ ಕಪೂರ್​ ಹೇಳಿದರೆ, ರೆಸೂಲ್​ ಸಹ 'ಸ್ಲಂಡಾಗ್​ ಮಿಲಿಯನೇರ್​' ಚಿತ್ರದ ಸೌಂಡ್​ ಡಿಸೈನ್​ಗಾಗಿ ಆಸ್ಕರ್​ ಪ್ರಶಸ್ತಿ ಬಂದ ನಂತರ, ಬಾಲಿವುಡ್​ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿದ್ದರು.

ಈಗ ಇದೇ ವಿಷಯವಾಗಿ ಮಾತನಾಡಿರುವ ಅವರು, ಬಾಲಿವುಡ್​ನಲ್ಲಿ ತಮಗೆ ಕೆಲಸ ಸಿಗದಿದ್ದರೂ, ಬಾಲಿವುಡ್​ ಎಂದು ತಮ್ಮ ಬಗ್ಗೆ ನಿರ್ದಯವಾಗಿ ವರ್ತಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಿಜ ಹೇಳಬೇಕೆಂದರೆ, ನನಗೆ ಹಾರುವುದಕ್ಕೆ ರೆಕ್ಕೆ ಸಿಕ್ಕಿದ್ದೇ ಅಲ್ಲಿ. ಸೌಂಡ್​ ಡಿಸೈನರ್​ ಆಗಿ ನನ್ನ ಆರಂಭದ ಪ್ರಯೋಗಗಳು ಶುರುವಾಗಿದ್ದು ಬಾಲಿವುಡ್​ನಲ್ಲೇ. ಕೆಲವು ಸೂಕ್ಷ್ಮ ಸಂವೇದನೆಯ ನಟರು ನನಗೆ ಬಹಳ ಪ್ರೋತ್ಸಾಹ ನೀಡಿದರು. ಶಾರೂಖ್​ ಖಾನ್​, ಅಮೀರ್​ ಖಾನ್​ ಮುಂತಾದವರು ಚಿತ್ರಗಳನ್ನು ಕೊಟ್ಟರು. ನನಗೆ ಪ್ರಶಸ್ತಿ ಸಿಕ್ಕ ನಂತರ ಅವಕಾಶಗಳು ಕಡಿಮೆಯಾದವು. ಆ ನಂತರ ನಾನು ಬೇರೆ ಬೇರೆ ಭಾಷಯೆ ಚಿತ್ರಗಳಿಗೆ ಸೌಂಡ್​ ಡಿಸೈನ್​ ಮಾಡುವ ಮೂಲಕ ಬ್ಯುಸಿಯಾದೆ. ಈಗ ಅದನ್ನೆಲ್ಲಾ ದಾಟಿ ಬಹಳ ದೂರ ಬಂದಿದ್ದೇನೆ. ಆಸ್ಕರ್​ ಶಾಪ ಮುಗಿಯಿತು. ನಾವು ಸಹ ಲೈಫ್​ನಲ್ಲಿ ಬಹಳಷ್ಟು ಮುಂದೆ ಹೋಗಿದ್ದೇವೆ' ಎಂದು ರೆಸೂಲ್​ ಹೇಳಿಕೊಂಡಿದ್ದಾರೆ.

ಇನ್ನು ರೆಹಮಾನ್ ಬಗ್ಗೆ ಮಾತನಾಡಿರುವ ಅವರು, 'ರೆಹಮಾನ್​ ಹೇಳಿರುವ ಗ್ಯಾಂಗ್​ಗಳ್ಯಾವುವೂ ನನಗೆ ಗೊತ್ತಿಲ್ಲ. ಅವರು ಹಾಗೆ ಹೇಳಿದ್ದಾರೆ ಎಂದರೆ, ಅವರಿಗೆ ಆ ರೀತಿ ಅನಿಸಿರಬಹುದು. ಇಷ್ಟಕ್ಕೂ ರೆಹಮಾನ್​ ಇಂಥಾ ಚಿಲ್ಲರೆ ರಾಜಕೀಯವನ್ನೆಲ್ಲಾ ಮೀರಿ ಬೆಳೆದಿದ್ದಾರೆ. ಅವರೊಬ್ಬ ಗ್ಲೋಬಲ್​ ಐಕಾನ್​ ಆಗಿ ಹೊರಹೊಮ್ಮಿದ್ದಾರೆ' ಎಂದು ರೆಸೂಲ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net