`ಶಾಕಿನಿ ಡಾಕಿನಿ'ಯಾದ ರೆಜೀನಾ-ನಿವೇತಾ

Regina - Nivetha - Final
Published on

ಹೈದರಾಬಾದ್: `ಎವರು' ಚಿತ್ರದ ಯಶಸ್ಸಿನ ನಂತರ ರೆಜೀನಾಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೀಗ, ಸುಧೀರ್ ವರ್ಮಾ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ರೆಜೀನಾ ನಟಿಸುತ್ತಿದ್ದಾರೆ. `ಎವರು' ಚಿತ್ರವು ಸ್ಪಾನಿಶ್ ಚಿತ್ರ `ದಿ ಇನ್ವಿಸಿಬಲ್ ಗೆಸ್ಟ್'ನ ರೀಮೇಕ್ ಆದರೆ, ಈ ಚಿತ್ರವು ಕೊರಿಯಾದ `ಮಿಡ್‌ನೈಟ್ ರನ್ನರ್ಸ್​' ಎಂಬ ಚಿತ್ರದ ರೀಮೇಕ್ ಅಂತೆ.

ಮೂಲ ಚಿತ್ರದಲ್ಲಿ ಇಬ್ಬರು ನಾಯಕರು ಮತ್ತು ಒಬ್ಬ ನಾಯಕಿ ಇದ್ದರು. ಇಲ್ಲಿನ ನೇಟಿವಿಟಿಗೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ತೆಲುಗು ಚಿತ್ರದಲ್ಲಿ ಇಬ್ಬರು ನಾಯಕರ ಬದಲಾಗಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಒಂದು ಪಾತ್ರವನ್ನು ರೆಜೀನಾ ಮಾಡಿದರೆ, ಇನ್ನೊಂದರಲ್ಲಿ ನಿವೇತಾ ಥಾಮಸ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ `ಶಾಕಿನಿ ಡಾಕಿನಿ' ಎಂಬ ಹೆಸರನ್ನು ಇಡಲಾಗಿದೆ.

ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ರೆಜೀನಾ ಮತ್ತು ನಿವೇತಾ ಇಬ್ಬರೂ ಇಲ್ಲಿ ಟ್ರೈನಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಬ್ಬರು ಟ್ರೈನಿಗಳು ಹೇಗೆ ಒಂದು ದೊಡ್ಡ ಜಾಲವನ್ನು ಬೇಧಿಸುತ್ತಾರೆ ಎಂಬ ಕಥೆ ಇರುವ ಈ ಚಿತ್ರವನ್ನು ಸುರೇಶ್ ಪ್ರೊಡಕ್ಷನ್ಸ್ ಮತ್ತು ಸುನೀತಾ ತಾತಿ ನಿರ್ಮಿಸುತ್ತಿದ್ದಾರೆ. `ಮಿಡ್‌ನೈಟ್ ರನ್ನರ್ಸ್' ಚಿತ್ರದ ಅಧಿಕೃತ ರೀಮೇಕ್ ಹಕ್ಕುಗಳನ್ನು ಈಗಾಗಲೇ ಪಡೆಯಲಾಗಿದ್ದು, ಬರವಣಿಗೆ ಕೆಲಸ ಮುಗಿಯುತ್ತಾ ಬಂದಿದೆಯಂತೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net