

ಬೆಂಗಳೂರು: ‘ನಮ್ಮದು ಆರು ಜನರ ಕುಟುಂಬ. ಆ ಕುಟುಂಬಕ್ಕೆ ಸುದೀಪ್ ಸಹ ಸೇರಿಕೊಂಡಿದ್ದಾನೆ. ಆತ ನನ್ನ ಹಿರಿಮಗ. ಇದೀಗ ಆರಿದ್ದಿದ್ದು ಏಳಾಯಿತು’- ಹೀಗೆ ಸುದೀಪ್ ಬಗ್ಗೆ ಮನದುಂಬಿ ಮಾತನಾಡಿದರು ಕ್ರೇಜಿಸ್ಟಾರ್ ರವಿಚಂದ್ರನ್. ಈ ಭಾವುಕ ಗಳಿಗೆಗೆ ಕಾರಣವಾಗಿದ್ದು ಡಿ. 10ಕ್ಕೆ ತೆರೆಗೆ ಬರಲಿರುವ ‘ದೃಶ್ಯ 2’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.
‘ಸುದೀಪ್ಗೆ ನಾನು ಕೇಳಿಕೊಳ್ಳುವುದೇನೂ ಇಲ್ಲ. ಹೀಗೊಂದು ಕಾರ್ಯಕ್ರಮ ಇದೆ ಬಾ ಎಂದಷ್ಟೇ ಆರ್ಡರ್ ಮಾಡುತ್ತೇನೆ. ಆತನದ್ದೂ ಏನಾದರೂ ಕಾರ್ಯಕ್ರಮ ಇದ್ದರೆ, ಬರಬೇಕು ಎನ್ನುತ್ತಾನೆ. ಹೀಗಿದೆ ನಮ್ಮಿಬ್ಬರ ನಡುವಿನ ಸಂಬಂಧ’ ಎನ್ನುವ ರವಿಚಂದ್ರನ್, ‘ಇಂಡಸ್ಟ್ರಿಯಲ್ಲಿ ನಮ್ಮನ್ನು ನೋಡುವ ರೀತಿ ಬದಲಾಗಿದೆ’ ಎಂದೂ ಹೇಳಿಕೊಳ್ಳುತ್ತಾರೆ.
ಪಂಚೆ ಮತ್ತು ಪಂಚ್ ಕೊಟ್ಟವರು ಪಿ.ವಾಸು: ‘1991ರಲ್ಲಿ ‘ಶಾಂತಿ ಕ್ರಾಂತಿ’ ಬೀಳೋ ಸಮಯದಲ್ಲಿ ನನ್ನನ್ನು ಮೇಲಕ್ಕೆತ್ತಿದ್ದು ‘ರಾಮಾಚಾರಿ’. ಅಂದು ನನ್ನ ಜೀವನಕ್ಕೆ ಪಂಚೆ ಮತ್ತು ಪಂಚ್ ಕೊಟ್ಟಿದ್ದು ಇದೇ ಸಿನಿಮಾ. ತಮಿಳಿನಲ್ಲಿ ಪಿ. ವಾಸು ನಿರ್ದೇಶನದ ‘ಚಿನ್ನ ತಂಬಿ’ ಸಿನಿಮಾ ಹಿಟ್ ಆಗಿತ್ತು. ಆ ಚಿತ್ರ ಕನ್ನಡದಲ್ಲಿ ‘ರಾಮಾಚಾರಿ’ ಆಯಿತು. ಆಗಿನಿಂದಲೇ ನನಗೆ ವಾಸು ಅವರ ಬಗ್ಗೆ ಗೊತ್ತು. ‘ದೃಶ್ಯ’ ಬಳಿಕ ಇದೀಗ ‘ದೃಶ್ಯ 2’ ರಲ್ಲೂ ಒಂದಾಗಿದ್ದೇವೆ’ ಎಂದು ನಿರ್ದೇಶಕರ ಬಗ್ಗೆ ಹೇಳಿದರು.
‘ದೃಶ್ಯ’ ನಾನೇ ಪ್ರೊಡ್ಯೂಸ್ ಮಾಡಬೇಕಿತ್ತು...: ‘ನನ್ನನ್ನು ಅವರ ಕುಟುಂಬದ ಒಬ್ಬ ಸದಸ್ಯನನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಧನ್ಯವಾದ’ ಎಂದ ಸುದೀಪ್ ಏಳು ವರ್ಷದ ಹಿಂದಿನ ಒಂದಷ್ಟು ವಿಚಾರಗಳನ್ನು ನೆನಪು ಮಾಡಿಕೊಂಡರು. ‘‘ಮಾಣಿಕ್ಯ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ‘ದೃಶ್ಯ’ ಸಿನಿಮಾ ನೋಡುವಂತೆ ರವಿ ಅಣ್ಣನಿಗೆ ಹೇಳಿದ್ದೆ. ಅವರು ಎರಡ್ಮೂರು ದಿನ ಹೂಂ ಎನ್ನುತ್ತಿದ್ದರಷ್ಟೇ. ನೋಡಿರಲಿಲ್ಲ. ಕೊನೆಗೆ ಆ ಸಿನಿಮಾ ಅವರಿಗೆ ಇಷ್ಟವಾದರೆ, ನಾನೇ ನಿರ್ವಿುಸಬೇಕೆನ್ನುವ ಪ್ಲಾನ್ ಇತ್ತು. ಕೊನೆಗೆ ಅದು ಬೇರೆಯವರಿಗೆ ಹೋಯಿತಾದರೂ, ಅಣ್ಣನೇ ನಟಿಸಬೇಕೆನ್ನುವ ನನ್ನ ಕಂಡಿಷನ್ ಇತ್ತು. ಅದರಂತೆ ಅವರೇ ನಟಿಸಿದರು’ ಎಂದು ಹೇಳಿಕೊಂಡರು ಸುದೀಪ್.
ಮಾಣಿಕ್ಯ, ದೃಶ್ಯದಿಂದ ಮಹತ್ತರ ತಿರುವು: ‘ತುಂಬ ಹೆದರಿಕೆಯಿಂದಲೇ ಸುದೀಪ್ ನನ್ನ ಬಳಿ ಬಂದು ‘ಮಾಣಿಕ್ಯ’ ಚಿತ್ರದಲ್ಲಿ ನಟಿಸುವಂತೆ ಕೇಳಿದ. ಹೀರೋ ಆಗಿ ನಟಿಸುತ್ತಿದ್ದವನಿಗೆ ಹೇಗೆ ಕೇಳಲಿ ಎಂಬ ಭಯ ಅವನಲ್ಲಿತ್ತು. ಆ ಸಿನಿಮಾ ನನ್ನ ಕರಿಯರ್ಗೆ ದೊಡ್ಡ ತಿರುವು ನೀಡಿತು. ಚಿತ್ರ ದೊಡ್ಡ ಗಳಿಕೆ ಮಾಡಿತು. ಅದರಲ್ಲಿನ ಅಪ್ಪನ ಪಾತ್ರ ನನ್ನನ್ನು ತುಂಬ ಬದಲಾಯಿಸಿತು. ಅದಾದ ಬಳಿಕ ಬಂದ ‘ದೃಶ್ಯ’ ಮತ್ತೊಂದು ಬದಲಾವಣೆಗೆ ದೂಡಿತು. ಅಲ್ಲಿಯೂ ಅಪ್ಪನಾಗಿ ಕಾಣಿಸಿಕೊಂಡೆ. ಇದೀಗ ಮತ್ತೆ ‘ದೃಶ್ಯ 2’ ಮೂಲಕ ಫ್ಯಾಮಿಲಿ ಆಡಿಯನ್ಸ್ ಕರೆತರಲಿದ್ದೇವೆ’ ಎಂದರು.