ರವಿಚಂದ್ರನ್ ನನ್ನ ಪಾಲಿಗೆ ಲಕ್ಕಿ..; ಮಿಸ್ ನಂದಿನಿ ಮುಹೂರ್ತದಲ್ಲಿ ಪ್ರಿಯಾಂಕಾ

Miss Nandini
Published on

ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ ...’

ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ ಕೋರಿದರು.

ಈ ಹಿಂದೆ ‘ಸೈಕೋಪಾತ್’ ಸಿನಿಮಾ ನಿರ್ದೇಶನ ಮಾಡಿದ್ದ ಗುರುದತ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಹೊಸಬರ ಜತೆಗೆ ಸಿನಿಮಾ ಮಾಡುವುದು ಒಂದು ರೀತಿಯ ಹೊಸ ಅನುಭವ. ಕಲಿಯುವುದಕ್ಕೂ ಹೆಚ್ಚಿರುವುದರಿಂದ ನನ್ನ ಬಹುತೇಕ ಸಿನಿಮಾಗಳು ಅವರ ಜತೆಯಲ್ಲಿಯೇ ಮಾಡುತ್ತಿದ್ದೇನೆ’ ಎನ್ನುವ ಪ್ರಿಯಾಂಕಾ, ಈ ಸಿನಿಮಾ ವಿಶೇಷತೆಯನ್ನೂ ಹೇಳಿಕೊಂಡಿದ್ದಾರೆ. ‘ಇಲ್ಲಿಯವರೆಗೂ ಬೇರೆಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೀಗ ಶಿಕ್ಷಕಿ ಪಾತ್ರ ಸಿಕ್ಕಿದೆ. ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಕಥೆ ಇದು. ನಿರ್ದೇಶಕರು ಸಂದೇಶದ ಜತೆಗೆ ಕಮರ್ಷಿಯಲ್ ಅಂಶಗಳನ್ನೂ ಕಥೆಯಲ್ಲಿ ಸೇರಿಸಿದ್ದಾರೆ’ ಎನ್ನುತ್ತಾರೆ. ವೀರೇಶ್ ಛಾಯಾಗ್ರಹಣ, ಸಾಯಿಸರ್ವೆಶ್ ಸಂಗೀತ ನೀಡಲಿದ್ದಾರೆ. ಆರ್.ಕೆ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ವಿುಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net