ರಮೇಶ್ ಬದಲು ರವಿಚಂದ್ರನ್; ಮುಗಿಯಿತು ‘ಅಂದೊಂದಿತ್ತು ಕಾಲ’ ಚಿತ್ರೀಕರಣ

Ravichandran
Published on

ಬೆಂಗಳೂರು: ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮವನ್ನೇ ಹೋಲುವ ಕಾರ್ಯಕ್ರಮ ಅದು. ಅದೇ ಚೇರು. ಅದೇ ತರಹದ ಸೆಟ್. ವ್ಯತ್ಯಾಸವೆಂದರೆ ರಮೇಶ್ ಬದಲು ರವಿಚಂದ್ರನ್, ಸಾಧಕರ ಸೀಟ್​ನಲ್ಲಿ ವಿನಯ್ ರಾಜಕುಮಾರ್ ಇದ್ದರು. ಕಾರ್ಯಕ್ರಮದ ಹೆಸರು ‘ಮೆಮೋರೀಸ್ ವಿಥ್ ರವಿಚಂದ್ರನ್.

ಇದು ನಿಜವಾದ ಕಾರ್ಯಕ್ರಮವಲ್ಲ. ‘ಅಂದೊಂದಿತ್ತು ಕಾಲ’ ಚಿತ್ರಕ್ಕಾಗಿ ಮಾಡಿದ ‘ವೀಕೆಂಡ್ ವಿಥ್ ರಮೇಶ್’ ನೆನಪಿಸುವಂತಹ ಒಂದು ಕಾರ್ಯಕ್ರಮ. ಇಲ್ಲಿ ರವಿಚಂದ್ರನ್, ವಿನಯ್ ಅವರ ಬದುಕಿನ ಪುಟಗಳನ್ನು ತೆರೆದಿಡುತ್ತಾರೆ. ವಿನಯ್ ಜೀವನದ ಮಹತ್ವದ ಘಟ್ಟಗಳನ್ನು ಹೇಳುವ ಮೂಲಕ ಚಿತ್ರದ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಈ ದೃಶ್ಯಗಳನ್ನು ಇತ್ತೀಚೆಗೆ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಯಿತು. ಈ ದೃಶ್ಯಗಳ ಮೂಲಕ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ.

ಚಿತ್ರೀಕರಣದ ಬಿಡುವಿನಲ್ಲಿ ಮಾತನಾಡಿದ ರವಿಚಂದ್ರನ್, ‘ಬಹುಶಃ ರಮೇಶ್ ಕಾಲ್​ಶೀಟ್ ಸಿಗಲಿಲ್ಲ ಅನಿಸುತ್ತದೆ. ಅದಕ್ಕೆ ನನ್ನನ್ನು ಕರೆದಿದ್ದಾರೆ. ನಾನು ಇದುವರೆಗೂ ಇಂತಹದ್ದೊಂದು ಪಾತ್ರ ಮಾಡಿರಲಿಲ್ಲ. ಇಲ್ಲಿ ವಿನಯ್ ಜೀವನವನ್ನು ಬಿಚ್ಚಿಡುವಂತಹ ಪಾತ್ರ ನನ್ನದು. ಮೊದಲಿನಿಂದ ಕೊನೆಯವರೆಗೂ ನನ್ನ ಪಾತ್ರವಿರುತ್ತದೆ. ನನ್ನ ಪಾತ್ರದ ಮೂಲಕವೇ ಚಿತ್ರ ಓಪನ್ ಆಗುತ್ತದೆ. ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ’ ಎಂದರು ರವಿಚಂದ್ರನ್.

ಇದೊಬ್ಬ ನಿರ್ದೇಶಕನ ಜರ್ನಿ ಎನ್ನುತ್ತಾರೆ ವಿನಯ್. ‘ಒಬ್ಬ ಮನುಷ್ಯ ಹೆಸರು ಮಾಡಬೇಕೆಂದರೆ, ಬಹಳಷ್ಟು ಜನರ ಸಹಕಾರ, ಪ್ರೋತ್ಸಾಹವಿರುತ್ತದೆ. ಅದನ್ನು ನೆನೆಯುವ ಕೆಲಸ ಈ ಚಿತ್ರದಲ್ಲಾಗುತ್ತಿದೆ. ರವಿಚಂದ್ರನ್ ಅವರನ್ನು ನೋಡಿದ್ದೆ. ಅವರ ಜತೆಗೆ ಕೆಲಸ ಮಾಡಿರಲಿಲ್ಲ. ಈ ಚಿತ್ರದ ಮೂಲಕ ಅವರ ಜತೆಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತು’ ಎನ್ನುತ್ತಾರೆ ವಿನಯ್.

ಅದಿತಿಗೆ ಈ ಚಿತ್ರದಲ್ಲಿ ತೂಕವಾಗಿ ಮಾತನಾಡುವ ಪಾತ್ರ ಸಿಕ್ಕಿದೆಯಂತೆ. ‘ಇಡೀ ಚಿತ್ರದಲ್ಲಿ ನಾನು ಇರುತ್ತೀನಿ ಎನ್ನುವುದಕ್ಕಿಂತ, ತೆರೆಯ ಮೇಲೆ ಎಷ್ಟು ಹೊತ್ತು ಇರುತ್ತೀನೋ, ಅಷ್ಟೇ ತೂಕವಾಗಿರುವ ಪಾತ್ರ ನನ್ನದು’ ಎಂದು ಹೇಳುತ್ತಾರೆ. ‘ಅಂದೊಂದಿತ್ತು ಕಾಲ’ ಚಿತ್ರವನ್ನು ಕೀರ್ತಿ ನಿರ್ದೇಶಿಸಿದರೆ, ಭುವನ್ ಸುರೇಶ್ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net