

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೊಂದು ದಿವಸದ ಪ್ಯಾಚ್ವರ್ಕ್ ಮಾತ್ರ ಬಾಕಿ ಇದೆ. ಈ ಮಧ್ಯೆ, ಅವರು ಪ್ರಭಾಸ್ ಅಭಿನಯದಲ್ಲಿ 'ಸಲಾರ್' ಎಂಬ ತೆಲುಗು ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಇದೀಗ ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಇಂಗ್ಲೀಷ್ ಮೇಷ್ಟ್ರು ಗೋಪಿಯಾಗಿ ಬಂದ್ರು ದಾನಿಶ್
'ಸಲಾರ್' ಚಿತ್ರಕ್ಕೆ ರವಿ ಬಸ್ರೂರು ಆಯ್ಕೆಯಾಗಿರುವ ವಿಷಯವನ್ನು ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಶುಕ್ರವಾರ ಬಸ್ರೂರಿನಲ್ಲಿ ರವಿ ಅವರ ಹೊಸ ರೆಕಾರ್ಡಿಂಗ್ ಸ್ಟುಡಿಯೋ ಇತ್ತು. ಈ ಸಂದರ್ಭದಲ್ಲಿ ಸ್ಟುಡಿಯೋ ಉದ್ಘಾಟಿಸಿರುವ ಪ್ರಶಾಂತ್, ರವಿಗೆ ಶುಭ ಕೋರಿದ್ದಾರೆ. 'ಉಗ್ರಂ'ನಿಂದ 'ಸಲಾರ್'ವರೆಗೂ ಜತೆಯಾಗಿ ನಡೆದು ಬರುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ರವಿ ಬಸ್ರೂರು ಅವರನ್ನು ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಪ್ರಶಾಂತ್ ನೀಲ್. ಕೆಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ರವಿ ಅವರ ಪ್ರತಿಭೆಯನ್ನು ಗುರುತಿಸಿ, 'ಉಗ್ರಂ' ಮೂಲಕ ರವಿ ಅವರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಅವಕಾಶ ನೀಡಿದ್ದರು ಪ್ರಶಾಂತ್. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರವಿ, ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಈಗ 'ಸಲಾರ್' ಮೂಲಕ ತೆಲುಗಿಗೆ ಹೊರಟು ನಿಂತಿದ್ದಾರೆ.
ಇದನ್ನೂ ಓದಿ: ಏಪ್ರಿಲ್ಗೆ ಯುವರತ್ನ ಸಿನಿಮಾ ಬಿಡುಗಡೆ
ಪ್ರಭಾಸ್ ಅಭಿನಯದ 'ಸಲಾರ್' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ಕುಮಾರ್ ಕಿರಗಂದೂರು ನಿರ್ಮಿಸುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಾಹಕರಾಗಿ ಆಯ್ಕೆಯಾಗಿದ್ದಾರೆ. ಈಗ ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಇನ್ನೆಷ್ಟು ಕನ್ನಡದ ತಂತ್ರಜ್ಱರು ಕೆಲಸ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.