

ಬೆಂಗಳೂರು: ‘ನಿಮ್ಮನ್ನು ಮನರಂಜಿಸುವುದು ನಮ್ಮ ಕೆಲಸ. ಆ ಕೆಲಸವನ್ನು ಮಾಡುತ್ತಿದ್ದೀನಿ ...’
ಹೀಗೆ ಹೇಳಿ ತಮ್ಮ ಟಿಪಿಕಲ್ ನಗೆ ನಕ್ಕರು ಸಂಗೀತ ನಿರ್ದೇಶಕ ರವಿ ಬಸ್ರೂರು. ಕನ್ನಡವಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕರಾಗಿ ಅವರು ಹೊರಹೊಮ್ಮಿದ್ದಾರೆ. ಪ್ರಭಾಸ್ ಅಭಿನಯದ ‘ಸಲಾರ್’, ಸಲ್ಮಾನ್ ಖಾನ್ ಅಭಿನಯದ ‘ಅಂತಿಮ್ ಚಿತ್ರಗಳಿಗೂ ಅವರದ್ದೇ ಸಂಗೀತ. ರವಿ ಅದೆಷ್ಟು ಬಿಜಿ ಎಂದರೆ ದಿನಕ್ಕೆ ಮೂರು ಗಂಟೆ ನಿದ್ದೆ ಮಾಡುತ್ತಾರಂತೆ. ಮೊಬೈಲ್ನಿಂದ ಸಮಯ ಹಾಳು ಎಂದು ಮೊಬೈಲ್ ಸಹ ಬಳಸುವುದಿಲ್ಲವಂತೆ.
‘ಮೊಬೈಲ್ ದೂರವಿಟ್ಟ ನಂತರ ಜೀವನ ಬಹಳ ಚೆನ್ನಾಗಿದೆ ಅಂತನಿಸುತ್ತಿದೆ. 24 ಗಂಟೆ ಸಂಗೀತದ ಧ್ಯಾನದಲ್ಲಿದ್ದರೆ ಬಹಳ ಖುಷಿಯಾಗುತ್ತದೆ. ಹಾಗಾಗಿ, ಮೊಬೈಲ್ ಇಟ್ಟು ಸಂಗೀತದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಒಂದಿಷ್ಟು ರಿಸರ್ಚ್ಗೆ ಸಾಕಷ್ಟು ಒತ್ತು ಕೊಡುತ್ತಿದ್ದೇನೆ’ ಎನ್ನುತ್ತಾರೆ ಅವರು.
ರವಿ ಏನೆಲ್ಲಾ ಮಾಡುತ್ತಿದ್ದಾರೆ, ‘ಕೆಜಿಎಫ್ 2’ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡುವುದಿಲ್ಲ. ‘ಕೆಲಸ ಮಾಡಿ ಸುಮ್ಮನಿರಬೇಕು ಅಂತ ನಾನು ಪ್ರಶಾಂತ್ ನೀಲ್ ಅವರನ್ನು ನೋಡಿ ಕಲಿತಿದ್ದೇನೆ. ಆ ಕೆಲಸಕ್ಕೆ ತಾಕತ್ತಿದ್ದರೆ ಅದೇ ಮಾತಾಡುತ್ತದೆ. ಅದರ ಬಗ್ಗೆ ನಾವು ಮಾತನಾಡಬಾರದು. ಹಾಗಾಗಿ, ಮಾತಾಡುವುದಕ್ಕಿಂತ ಕೆಲಸ ಮಾಡುವುದಕ್ಕೆ ಬಯಸುತ್ತೀನಿ ನಾನು’ ಎನ್ನುತ್ತಾರೆ.
ಇನ್ನು, ‘ಅಂತಿಮ್ ಚಿತ್ರದ ಬಿಡುಗಡೆಗೂ ಮುನ್ನ ನಡೆದ ಸಮಾರಂಭದಲ್ಲಿ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದರು ಸಲ್ಮಾನ್ ಖಾನ್. ಈ ಬಗ್ಗೆ ಮಾತನಾಡಿರುವ ರವಿ, ‘ನಿಜ ಹೇಳಬೇಕೆಂದರೆ, ನನ್ನ ಮತ್ತು ಸಲ್ಮಾನ್ ಅವರ ಭೇಟಿಯಾಗಿದ್ದೇ ವೇದಿಕೆಯ ಮೇಲೆ. ಅದಕ್ಕೂ ಮುನ್ನ ಅವರ ಭೇಟಿ ಮಾಡಿರಲಿಲ್ಲ. ನನ್ನ ಕೆಲಸ ಎಲ್ಲೋ ಅವರಿಗೆ ಇಷ್ಟವಾಗಿರಬಹುದು. ಹಾಗಾಗಿ, ಒಳ್ಳೆಯ ಮಾತಾಡಿದ್ದಾರೆ. ಸ್ಟೇಜ್ ಮೇಲೆ ಮಾತಾಡಿದ್ದಷ್ಟೇ. ಆಮೇಲೆ ಮಾತಾಡಲಿಲ್ಲ. ತಕ್ಷಣ ಹೊರಟು ಬಂದೆ. ಇಲ್ಲವಾದರೆ ‘ಮದಗಜ’ ಬಿಡುಗಡೆಯಾಗುತ್ತಿರಲಿಲ್ಲ. ಪರಿಸ್ಥಿತಿ ಹೇಗಿದೆಯೆಂದರೆ, ಸ್ವಲ್ಪ ತಡವಾದರೂ ನಿರ್ವಪಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಒಂದರ ಹಿಂದೊಂದು ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ.
ಕಡಲ್ ರೆಡಿ: ‘ಗಿರ್ವಿುಟ್ ನಂತರ ರವಿ ಯಾಕೆ ಯಾವ ಚಿತ್ರವನ್ನೂ ನಿರ್ದೇಶಿಸಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅವರು ಸದ್ದಿಲ್ಲದೆ ‘ಕಡಲ್’ ಎಂಬ ಕನ್ನಡ ಸಿನಿಮಾ ಮಾಡಿದ್ದಾರಂತೆ. ಅದು ತಯಾರಾಗಿದ್ದು, ಬಿಡುಗಡೆಯಾಗಬೇಕಷ್ಟೇ. ಸಮಯ ನೋಡಿಕೊಂಡು ಆ ಚಿತ್ರ ಬಿಡುಗಡೆ ಮಾಡುವುದಾಗಿ ಅವರು ಹೇಳುತ್ತಾರೆ.