ನನ್ನನ್ನು ಸಹಿಸಿಕೊಂಡಿದ್ದಿಕ್ಕೆ ಥ್ಯಾಂಕ್ಸ್​ ... ಹೀಗ್ಯಾಕೆ ಹೇಳಿದ್ರು ರಶ್ಮಿಕಾ?

Rashmika Mandanna - Final
Published on

ಚೆನ್ನೈ: ಕಳೆದ ಒಂದು ವರ್ಷದಿಂದ ತೆಲುಗಿನಲ್ಲಿ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ ಮಂದಣ್ಣ, ಈ ಮಧ್ಯೆ ತಮಿಳಿನಲ್ಲೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ತಮ್ಮನ್ನು ಇಷ್ಟು ದಿನಗಳ ಕಾಲ ಸಹಿಸಿಕೊಂಡಿದ್ದಿಕ್ಕೆ ಚಿತ್ರತಂಡದವರಿಗೆ ರಶ್ಮಿಕಾ ಥ್ಯಾಂಕ್ಸ್​ ಹೇಳಿದ್ದಾರೆ.

ಅಂದಹಾಗೆ, ರಶ್ಮಿಕಾ ಮಂದಣ್ಣ ಅಭಿನಯಿಸಿರುವ ತಮಿಳು ಚಿತ್ರದ ಹೆಸರು 'ಸುಲ್ತಾನ್​'. ಸೂರ್ಯ ಅವರ ಸಹೋದರ ಕಾರ್ತಿ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಕಳೆದ ವರ್ಷವೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಲಾಕ್​ಡೌನ್​ಗೂ ಮುನ್ನ ಒಂದಿಷ್ಟು ದಿನಗಳ ಚಿತ್ರೀಕರಣವಾಗಿತ್ತು. ಲಾಕ್​ಡೌನ್​ ನಂತರ ಚಿತ್ರೀಕರಣ ಮುಕ್ತಾಯವಾಗಿದೆ.

ಈ ಕುರಿತು ಟ್ವೀಟ್​ ಮಾಡಿರುವ ರಶ್ಮಿಕಾ, 'ನಾನು ಬಹಳ ಇಷ್ಟಪಟ್ಟ ಕೆಲವೇ ಚಿತ್ರತಂಡಗಳ ಪೈಕಿ ಈ ಚಿತ್ರತಂಡ ಸಹ ಒಂದು. ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಅನಾರೋಗ್ಯದಿಂದ ಬಳಲುತ್ತಿದ್ದರೂ, ನಿಜಕ್ಕೂ ಈ ಚಿತ್ರದಲ್ಲಿ ಕೆಲಸ ಮಾಡುವುದಕ್ಕೆ ಬಹಳ ಖುಷಿಪಟ್ಟಿದ್ದೀನಿ. ನನ್ನನ್ನು ಸಹಿಸಿಕೊಂಡಿದ್ದಿಕ್ಕೆ ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್​' ಎಂದು ಟ್ವೀಟ್​ ಮಾಡಿದ್ದಾರೆ.

ಕಾರ್ತಿ ಸಿನಿಮಾ ಕೆರಿಯರ್​ನಲ್ಲೇ ದೊಡ್ಡ ಚಿತ್ರ ಎಂದು ಹೇಳಲಾಗುತ್ತಿರುವ 'ಸುಲ್ತಾನ್​' ಚಿತ್ರವನ್ನು ಬಕ್ಕಿಯರಾಜ್​ ಕಣ್ಣನ್​ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಾರ್ತಿ ಮತ್ತು ರಶ್ಮಿಕಾ ಜತೆಗೆ ಯೋಗಿ ಬಾಬು, ಪೊನ್ನಾಂಬಲಂ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net