ಮಿಷನ್ ಪ್ರಾರಂಭ; ಮೊದಲ ದಿನದ ಶೂಟಿಂಗ್ ಅನುಭವ ಹಂಚಿಕೊಂಡ ರಶ್ಮಿಕಾ...

Rashmika
Published on

‘ಮಿಷನ್ ಮಜ್ನು’ ಎಂಬ ಚಿತ್ರದ ಮೂಲಕ ರಶ್ಮಿಕಾ, ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದರೂ, ರಶ್ಮಿಕಾ ಮಾತ್ರ ಇನ್ನೂ ಎಂಟ್ರಿ ಕೊಟ್ಟಿರಲಿಲ್ಲ. ಶುಕ್ರವಾರ ರಶ್ಮಿಕಾ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ, ಬಾಲಿವುಡ್​ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಂತಾಗಿದೆ.

ತಮ್ಮ ಇನ್​ಸ್ಟಾಗ್ರಾಂನಲ್ಲಿ ಕ್ಲಾಪ್​ಬೋರ್ಡ್ ಹಿಡಿದುಕೊಂಡಿರುವ ಒಂದು ಸಣ್ಣ ವಿಡಿಯೋ ಹಾಕಿಕೊಂಡಿರುವ ರಶ್ಮಿಕಾ, ತಮಗೆ ಅವಕಾಶ ಕೊಟ್ಟವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಮೊದಲ ದಿನದ ಅನುಭವವನ್ನು ಹಂಚಿಕೊಂಡಿರುವ ರಶ್ಮಿಕಾ, ‘ಹೊಸದಾಗಿ ಕ್ಯಾಮರಾ ಮುಂದೆ ನಿಲ್ಲುವವರು ಎದುರಿಸುವ ಭಯ ಮತ್ತು ಸಂತೋಷವನ್ನು ಮತ್ತೊಮ್ಮೆ ಅನುಭವಿಸುವಂತಾಗಿದೆ. ಇಂಥದ್ದೊಂದು ಚಿತ್ರದ ಭಾಗವಾಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಮತ್ತು ಸಿದ್ಧಾರ್ಥ್, ಶಂತನು ಮತ್ತು ತಂಡದ ಜತೆಗೆ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಮಿಷನ್ ಮಜ್ನು’ ಚಿತ್ರವು ಸ್ಪೈ ಥ್ರಿಲ್ಲರ್ ಚಿತ್ರವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಕಥೆಯಾಗಿದೆ. 70 ಮತ್ತು 80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಮೊದಲ ಬಾರಿಗೆ ಚಿತ್ರದಲ್ಲಿ ಸ್ಪೈ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ರಹಸ್ಯ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಂಧವ್ಯ ಹೇಗೆ ಬದಲಾಯಿತು ಎಂದು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಶಂತನು ಬಾಗ್ಚಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜನವರಿಯಿಂದಲೇ ಲಕ್ನೋದಲ್ಲಿ ಪ್ರಾರಂಭವಾಗಿದ್ದು, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡಕ್ಕೆ ರಶ್ಮಿಕಾ ಅವರ ಎಂಟ್ರಿಯಿಂದ ಇನ್ನಷ್ಟು ಕಳೆಗಟ್ಟಿದರೆ ಆಶ್ಚರ್ಯವೇನಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net