

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರಿಗೆ ಪರಿಚಯ ಮಾಡಿಸುವ ಅಗತ್ಯವಿಲ್ಲ. ನೆಗಿಟಿವ್ ಮತ್ತು ಪಾಸಿಟಿವ್ ಎರಡು ವಿಧದಲ್ಲೂ ರಶ್ಮಿಕಾ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಕನ್ನಡತಿ ಎಂಬ ಹೆಮ್ಮೆಯ ಸಂಗತಿ ಒಂದೆಡೆಯಾದರೆ, ಕನ್ನಡ ವಿರೋಧಿ ಎಂಬ ಕಳಂಕವನ್ನು ರಶ್ಮಿಕಾ ಹೊತ್ತುಕೊಂಡಿದ್ದಾರೆ. ಅದೇನೆ ಇರಲಿ ಓರ್ವ ಕಲಾವಿದೆಯಾಗಿ ಎಲ್ಲ ಭಾಷೆಗಳಲ್ಲೂ ರಶ್ಮಿಕಾ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ರಶ್ಮಿಕಾ ಕೈಯಲ್ಲಿ ಅನೇಕ ಮಂದಿ ಟ್ಯಾಟೂ ಇರುವುದನ್ನು ಗಮನಿಸಿದ್ದಾರೆ. ಕೈಯಲ್ಲಿ Irreplaceable ( ಬದಲಾಯಿಸಲಾಗದ ಅಥವಾ ತುಂಬಲಾಗದ) ಎಂದು ಟ್ಯಾಟೂ ಬರೆಸಿಕೊಂಡಿದ್ದಾರೆ. ಟ್ಯಾಟೂ ಎದ್ದು ಕಾಣುವಂತಹ ತಮ್ಮ ಸುಂದರವಾದ ಫೋಟೋಗಳನ್ನು ರಶ್ಮಿಕಾ ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ರಶ್ಮಿಕಾ ಈ ಪದವನ್ನೇ ಟ್ಯಾಟೂಗೆ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿರಬಹುದು, ಇದೀಗ ಆ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.
ಗುಡ್ ಟೈಮ್ಸ್ ಜೊತೆಗಿನ ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ, ತನ್ನ ಬಲಗೈಯಲ್ಲಿ ಮಣಿಕಟ್ಟಿನ ಕೆಳಗೆ 'Irreplaceable' ಎಂಬ ಪದವನ್ನು ಹಚ್ಚೆ ಹಾಕಿಸಿಕೊಳ್ಳಲು ಏಕೆ ಆರಿಸಿಕೊಂಡೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಆರಂಭದಲ್ಲಿ ನಾನು ಟ್ಯಾಟೂ ಹಾಕಿಸಿಕೊಳ್ಳಬೇಕೆಂದು ಬಯಸಿರಲಿಲ್ಲ. ಒಂದು ದಿನ ನಾನು ಕಾಲೇಜಿನಲ್ಲಿರುವಾಗ ಒಬ್ಬ ಹುಡುಗ ಬಂದು, ಹುಡುಗಿಯರು ತುಂಬಾ ನೋವು ಅನುಭವಿಸುವುದಿಲ್ಲ ಏಕೆಂದರೆ, ಹುಡುಗಿಯರು ಸೂಜಿಗೆ ತುಂಬಾ ಹೆದರುತ್ತಾರೆ ಎಂದಿದ್ದ. ಆತನ ಮಾತಿನಿಂದ ನಾನು ಆಗ ರೆಬೆಲ್ ಆಗಿದ್ದೆ. ನಾನು ನಿಮಗೆ ನಿರೂಪಿಸುತ್ತೇನೆ ಅಂತಾ ಹೇಳಿದ್ದೆ. ಆ ಬಳಿಕ ನಾನು ಹಚ್ಚೆ ಹಾಕಿಸಿಕೊಳ್ಳಲು ಬಯಸಿದೆ. ಆದರೆ, ಆ ಕ್ಷಣದಲ್ಲಿ ನಿಜವಾಗಿ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ ಎಂದು ರಶ್ಮಿಕಾ ಹೇಳಿದರು.
ಏನು ಹಚ್ಚೆ ಹಾಕಿಸಿಕೊಳ್ಳಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಕುಳಿತುಕೊಂಡು ತುಂಬಾ ಯೋಚಿಸುತ್ತಿದ್ದೆ. ನಾನು ಯಾವಾಗಲೂ ನಿಜವಾಗಿರಲು ಮತ್ತು ನಾನಾಗಿಯೇ ಇರಬೇಕೆಂಬ ತುಡಿತ ನನ್ನಲ್ಲಿದೆ ಎಂಬುದನ್ನು ಅರಿತುಕೊಂಡೆ. ಪ್ರತಿಯೊಬ್ಬ ಮನುಷ್ಯನ ಸ್ಥಾನವನ್ನು ಯಾರೂ ತುಂಬಲಾರರು ಎಂಬುದನ್ನು ನಾನು ನಂಬುತ್ತೇನೆ. ನಿಮ್ಮ ಶಕ್ತಿಯನ್ನು ಬೇರೆಯವರ ಶಕ್ತಿಯಿಂದ ಬದಲಾಯಿಸಲು ಸಾಧ್ಯವಿಲ್ಲ, ಬೇರೆ ಯಾರೂ ನೀವಾಗಿರಲು ಸಾಧ್ಯವಿಲ್ಲ, ನೀವು ಅವರಿಗೆ ಭರಿಸಲಾಗದವರು, ನಾವೆಲ್ಲರೂ ನಮ್ಮದೇ ಆದ ವಿಶೇಷತೆ ಹೊಂದಿರುವವರು ಮತ್ತು ಭರಿಸಲಾಗದವರು, ಆದ್ದರಿಂದ ನಾನು ಅದನ್ನು ತೋರಿಸಲು ಬಯಸುತ್ತೇನೆ ಮತ್ತು ಜನರಿಗೆ ನೆನಪಿಸಲು ಬಯಸುತ್ತೇನೆ ಎನ್ನುವ ಮೂಲಕ 'Irreplaceable' ಟ್ಯಾಟೂ ಹಿಂದಿನ ಕಾರಣವನ್ನು ರಶ್ಮಿಕಾ ತಿಳಿಸಿದರು. (ಏಜೆನ್ಸೀಸ್)