

ಭಾರತೀಯ ತಂದೆಯನ್ನು ಹೊಂದಿದ್ದ ಶೋಭರಾಜ್, ತನ್ನ ಕೂಸೂ ಭಾರತದಲ್ಲಿ ಜನಿಸಬೇಕೆಂದು ಉದ್ದೇಶಿಸಿದ. ಹೀಗಾಗಿ 1970ರಲ್ಲಿ ಮುಂಬೈಗೆ ಗರ್ಭಿಣಿ ಪತ್ನಿಯೊಡನೆ ಬಂದ. ಅಲ್ಲಿ ಉಷಾ ಎನ್ನುವ ಹೆಣ್ಣು ಮಗುವಿಗೆ ಚಂಟಾಲ್ ಜನ್ಮವಿತ್ತಳು. ಮುಂಬೈನಲ್ಲಿ ಶೋಭರಾಜ್ ವಿದೇಶೀ ಕಾರುಗಳ ಕಳ್ಳತನ ನಡೆಸುತ್ತಾ ಐಷಾರಾಮಿ ಜೀವನ ಸಾಗಿಸತೊಡಗಿದ. ಜೂಜಾಟದ ವ್ಯಸನಿಯಾಗಿದ್ದ ಆತ ಜೂಜಿನಿಂದಲೂ ಸಾಕಷ್ಟು ಹಣ ಗಳಿಸಿದ. ಮುಂದಿನ ವರ್ಷವೇ ಆತ ಏರ್ ಇಂಡಿಯಾ ನಗದು ಕೌಂಟರಿನ ದರೋಡೆಯ ಸಂಚು ನಡೆಸಿ ಇನ್ಸ್ಪೆಕ್ಟರ್ ಮಧುಕರ್ ಜೆಂಡೆಯವರ ಬಲೆಗೆ ಬಿದ್ದ.
ಮುಂಬೈನ ಪ್ರಕರಣದಲ್ಲಿ ಜಾಮೀನಾದ ಕೂಡಲೇ ಶೋಭರಾಜ್ ಪತ್ನಿ ಮತ್ತು ಮಗಳೊಂದಿಗೆ ಅಫ್ಘಾನಿಸ್ತಾನದ ಕಾಬೂಲ್ಗೆ ಪರಾರಿಯಾದ. ಅಲ್ಲಿ ಆತ ಪಾಕಿಸ್ತಾನದ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಮಾಡಿ ಹಣ ಗಳಿಸಿದ. ಅದೇ ವರ್ಷ ಆತ ಆಫ್ಘನ್ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ. ಆಗ ಅವನ ಪತ್ನಿ ಮಗುವಿನೊಡನೆ ತಾಯ್ನಾಡಿಗೆ ಮರಳಿದಳು. ಏತನ್ಮಧ್ಯೆ ಚಾಲಾಕಿತನದಿಂದ ಜೈಲಿನಿಂದ ತಪ್ಪಿಸಿಕೊಂಡ ಶೋಭರಾಜ್ ಬೇರೆ ಹೆಸರಿನಲ್ಲಿ 1971ರ ಡಿಸೆಂಬರಿನಲ್ಲಿ ದೆಹಲಿಗೆ ಬಂದ. ಪಂಚತಾರಾ ಹೋಟೆಲ್ ಅಶೋಕಾದಲ್ಲಿ ವಾಸ್ತವ್ಯ ಹೂಡಿದ. ಅದೇ ಸಮಯಕ್ಕೆ ಚಂಟಾಲ್ ಮಗುವನ್ನು ಪ್ಯಾರಿಸಿನಲ್ಲಿ ಬಿಟ್ಟು ಬಂದು ಅವನನ್ನು ಸೇರಿಕೊಂಡಳು. ಮೊದಲ ಮಹಡಿಯ ತನ್ನ ರೂಮಿನ ಕೆಳಗಡೆಯೇ ಆಭರಣಗಳ ಅಂಗಡಿ ಇರುವುದನ್ನು ಗಮನಿಸಿದ ಆತ, ತನ್ನ ಕೋಣೆಯ ನೆಲಕ್ಕೆ ರಂಧ್ರ ಮಾಡಿ ಆ ಅಂಗಡಿಗೆ ನುಗ್ಗಿ ದೋಚುವ ಯೋಜನೆ ಹಾಕಿದ. ಆದರೆ ಆತ ನೆಲವನ್ನು ಕೊರೆಯುವಾಗ ಡ್ರಿಲ್ಲಿಂಗ್ ಮಷಿನ್ ಶಬ್ದವು ಇತರರನ್ನು ಎಚ್ಚರಿಸಿ ಹೋಟೆಲ್ಲಿನ ಸಿಬ್ಬಂದಿಗೆ ಕಂಪ್ಲೇಂಟ್ ಹೋಯಿತು. ಏನೋ ಸಬೂಬು ಹೇಳಿ ಪಾರಾದ ಶೋಭರಾಜ್ ಆ ಯೋಜನೆಯನ್ನು ಕೈಬಿಟ್ಟ. ಎರಡು ದಿನಗಳ ನಂತರ ಅದೇ ಆಭರಣದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಹೋದ. ಅಂಗಡಿಯಲ್ಲಿ ಒಬ್ಬನೇ ಇದ್ದ ಮಾಲೀಕನನ್ನು ತನ್ನ ಮಾತುಗಳಿಂದ ಮರಳು ಮಾಡಿ ಅವನಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿಯನ್ನು ಬೆರೆಸಿ ಕುಡಿಸಿದ. ಆತ ನಿದ್ರೆಗೆ ಜಾರಿದಾಗ 10 ಲಕ್ಷ ರೂ ಬೆಲೆಯ ಆಭರಣಗಳನ್ನು ದೋಚಿದ. ನಂತರ ತನ್ನ ಕೋಣೆಗೆ ಅವಸರದಲ್ಲಿ ವಾಪಸಾಗುತ್ತಿರುವ ಸಮಯದಲ್ಲಿ ಅದೇ ಅಂಗಡಿಯ ಸೇವಕನೊಬ್ಬ ಅಂಗಡಿಗೆ ಬಂದು ಕಳ್ಳತನವಾದದ್ದನ್ನು ಗಮನಿಸಿದ. ಆತ ಶೋಭರಾಜ್ನ ಮೇಲೆ ಅನುಮಾನಗೊಂಡು ಇತರರನ್ನು ಎಚ್ಚರಿಸಿದ. ಶೋಭರಾಜ್ನನ್ನು ತಡೆದು ನಿಲ್ಲಿಸಿದ ಸಿಬ್ಬಂದಿ ಅವನನ್ನು ಶೋಧನೆಗೊಳಪಡಿಸಿದಾಗ ಕಳುವಿನ ಮಾಲು ದೊರೆಯಿತು. ಅವನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಪೊಲೀಸರು ಶೋಭರಾಜನ ಕೋಣೆಯನ್ನು ಶೋಧಿಸಿದಾಗ ಅಲ್ಲಿ ಮಾದಕ ವಸ್ತುಗಳಲ್ಲದೆ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್ಗಳೂ ಸಿಕ್ಕವು. ಅವನು ತನ್ನ ಕೋಣೆಯ ನೆಲವನ್ನು ಡ್ರಿಲ್ ಮಾಡಲು ಹೊರಟಿದ್ದ ಕುರುಹೂ ಸಿಕ್ಕಿತು. ಅವನ ವಿರುದ್ಧ ದರೋಡೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪ್ರಕರಣಗಳನ್ನು ದಾಖಲು ಮಾಡಿ ಅವನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು. ಜೈಲಿನಲ್ಲಿ ಕೆಲವು ದಿನಗಳನ್ನು ಕಳೆದ ಆತ ಒಂದು ರಾತ್ರಿ ತನಗೆ ತೀವ್ರವಾಗಿ ಹೊಟ್ಟೆನೋಯುತ್ತಿದೆ ಎಂದು ನಾಟಕವಾಡಿದ. ಅವನನ್ನು ವೆಲ್ಲಿಂಗ್ಡನ್ ಆಸ್ಪತ್ರೆಗೆ ಸೇರಿಸಿ ಅಪೆಂಡಿಸೈಟಿಸ್ ರೋಗವೆಂದು ಶಂಕಿಸಿ ಆಪರೇಷನ್ ಮಾಡಲಾಯಿತು. ಆತ ಆಸ್ಪತ್ರೆಯಲ್ಲಿರುವ ಸಮಯದಲ್ಲಿಯೇ ಭಾರತ-ಪಾಕ್ ಯುದ್ಧ ಆರಂಭವಾಗಿತ್ತು. ಪಾಕ್ ವಿಮಾನಗಳ ದಾಳಿಯಿಂದ ತಪ್ಪಿಸಿಕೊಳ್ಳಲು ರಾತ್ರಿ ಬ್ಲಾಕ್ಔಟ್ ಮಾಡಲು ದೀಪಗಳನ್ನು ನಂದಿಸಲಾಗುತ್ತಿತ್ತು. ಇಂತಹ ಸಂದರ್ಭವನ್ನುಪಯೋಗಿಸಿ ಶೋಭರಾಜ್ ಪತ್ನಿಯ ಸಹಾಯದೊಂದಿಗೆ ಆಸ್ಪತ್ರೆಯಿಂದ ಪರಾರಿಯಾಗಿ ಕಾಬೂಲಿಗೆ ಓಡಿಹೋದ. ಅಫ್ಘಾನಿಸ್ತಾನದಲ್ಲಿ ಯಥೇಚ್ಛವಾಗಿ ಅಫೀಮು ಬೆಳೆಯುವುದರ ಕಾರಣ ಶೋಭರಾಜ್ ಮಾದಕವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ. ಅಲ್ಲಿ ಪೊಲೀಸರ ಕಾಟ ಹೆಚ್ಚಾದಾಗ ಪಾಕಿಸ್ತಾನಕ್ಕೆ ಓಡಿಹೋದ. ಅಲ್ಲಿಂದ ಆತ ಇರಾನ್ಗೆ ಹೋಗಲೆಂದು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದ. ಮಾರ್ಗಮಧ್ಯದಲ್ಲಿ ಚಾಲಕನನ್ನು ಕೊಲೆ ಮಾಡಿ ಅವನ ದೇಹವನ್ನು ರಸ್ತೆಯಲ್ಲಿ ಎಸೆದ. ತಾನೇ ಕಳವಿನ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ ಪಾಕಿಸ್ತಾನದ ಪೊಲೀಸರು ಅವನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದರು. ಕೆಲವು ವಾರಗಳ ಕಾಲ ಜೈಲಲ್ಲಿದ್ದ ಶೋಭರಾಜ್ ಹೊಟ್ಟೆನೋವೆಂದು ಹೇಳಿ ಆಸ್ಪತ್ರೆಗೆ ದಾಖಲಾದ. ಅಲ್ಲಿನ ಕಾವಲುಗಾರರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ಇರಾನ್ ರಾಜಧಾನಿ ಟೆಹರಾನ್ ತಲುಪಿದ.
ಟೆಹರಾನಿನಲ್ಲಿಯೂ ಶೋಭರಾಜ್ ಕುಕೃತ್ಯಗಳನ್ನು ಮುಂದುವರಿಸಿದ. ಪೊಲೀಸರು ಅವನನ್ನು ಹುಡುಕತೊಡಗಿದಾಗ ಟರ್ಕಿಗೆ ಓಡಿಹೋದ. ಟರ್ಕಿಯಲ್ಲಿ ಸೋದರ ಆಂಡ್ರೆ (ಫ್ರೆಂಚ್ ಸೈನಿಕನಿಂದ ಅವನ ತಾಯಿಗೆ ಹುಟ್ಟಿದ ಮಗ) ಯನ್ನು ಸೇರಿಕೊಂಡು ಅವನ ಅಪರಾಧಗಳಲ್ಲಿ ಭಾಗಿಯಾದ. ಪೊಲೀಸರು ಬಲೆ ಬೀಸಿದಾಗ ಇಬ್ಬರೂ ಗ್ರೀಸ್ನ ರಾಜಧಾನಿ ಅಥೆನ್ಸ್ಗೆ ಓಡಿಹೋದರು. ಅಲ್ಲಿ ಸಿಕ್ಕಿಬಿದ್ದು ಪೊಲೀಸರ ಅತಿಥಿಗಳಾದರು. ಜೈಲಿನಿಂದ ನ್ಯಾಯಾಲಯಕ್ಕೆ ರವಾನಿಸುವ ಸಮಯದಲ್ಲಿ ಶೋಭರಾಜ್ ಪರಾರಿಯಾದ. ಆಂಡ್ರೆಯನ್ನು ಪೊಲೀಸರು ಟರ್ಕಿ ದೇಶಕ್ಕೇ ಮರಳಿಸಿದರು. ಅಲ್ಲಿ ಆಂಡ್ರೆಗೆ 18 ತಿಂಗಳ ಜೈಲು ಶಿಕ್ಷೆಯಾಯಿತು. ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗುವುದರಲ್ಲಿ ಅತೀವ ನಿಪುಣತೆ ತೋರಿಸುವ ಕಾರಣ ಶೋಭರಾಜ್ಗೆ ‘ಸರ್ಪ’ ಎಂಬ ಉಪನಾಮವು ಬಂದಿತು. ಗ್ರೀಸಿನಿಂದ ಪರಾರಿಯಾದ ಶೋಭರಾಜ್ ಮತ್ತೆ ಕಾಬೂಲಿಗೆ ವಾಪಸಾದ. ಆ ಸಮಯದಲ್ಲಿ ಪಾಶ್ಚಿಮಾತ್ಯ ದೇಶಗಳ ಕೆಲವು ಯುವಕ ಯುವತಿಯರು ಹಿಂದು ಮತ್ತು ಬೌದ್ಧ ಧರ್ಮಗಳತ್ತ ಮಾರುಹೋಗಿ ಅಫ್ಘಾನಿಸ್ತಾನ, ನೇಪಾಳ, ಭಾರತ, ಥೈಲೆಂಡ್ ಮುಂತಾದ ದೇಶಗಳಿಗೆ ಬಂದು ತಂಗತೊಡಗಿದ್ದರು. ಸ್ವಚ್ಛಂದ ಜೀವನಶೈಲಿ ಅನುಸರಿಸುತ್ತಿದ್ದ ಈ ಯುವಜನಾಂಗವು ಮಾದಕವಸ್ತುಗಳ ವ್ಯಸನಿಗಳಾಗಿದ್ದು ಅತೀಂದ್ರಿಯತೆ, ಮುಕ್ತ ಸೆಕ್ಸ್ಗಳತ್ತ ವಾಲಿತ್ತು. ಅವರನ್ನೇ ಟಾರ್ಗೆಟ್ ಮಾಡಿಕೊಂಡ ಶೋಭರಾಜ್ ತನ್ನ ಬಹುಭಾಷಾ ಜ್ಞಾನದಿಂದ ಸುಲಭವಾಗಿ ಅವರ ಸ್ನೇಹ ಬೆಳೆಸಿ ಅವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡತೊಡಗಿದ. ಡ್ರಗ್ಸ್ ಕೊಳ್ಳಲು ಹಣವಿಲ್ಲದಿದ್ದಾಗ ಅವರ ಆಭರಣಗಳನ್ನು ಕಡಿಮೆ ಹಣಕ್ಕೆ ಖರೀದಿಸತೊಡಗಿದ. ಯಾರ ಬಳಿ ಹೆಚ್ಚಿನ ಹಣವಿದೆಯೋ ಅಂತಹ ಹಿಪ್ಪಿಗಳ ನಿಕಟ ಗೆಳೆತನ ಮಾಡಿಕೊಂಡು ಅವರಿಗೆ ಬೇಕೆಂತಲೇ ಹೆಚ್ಚು ಪ್ರಮಾಣದ ಮಾದಕ ವಸ್ತುಗಳನ್ನು ತಿನ್ನಿಸುತ್ತಿದ್ದ. ಅವರು ಮಾದಕ ಲೋಕದಲ್ಲಿ ವಿಹರಿಸುತ್ತಿರುವಾಗ ಅವರ ಟ್ರಾವಲರ್ಸ್ ಚೆಕ್ಕುಗಳು, ನಗದು ಹಣ ಮತ್ತು ಪಾಸ್ಪೋರ್ಟ್ಗಳನ್ನು ಕಳವು ಮಾಡುತ್ತಿದ್ದ. ಇದಲ್ಲದೆ ತಾನೊಬ್ಬ ಮುತ್ತುರತ್ನಗಳ ವ್ಯಾಪಾರಿಯೆಂದು ಬಿಂಬಿಸಿ ಅವರಿಗೆ ನಕಲಿ ಕಲ್ಲುಗಳನ್ನು ಮಾರಿ ಹಣ ಗಳಿಸಿದ. 1975ರಲ್ಲಿ ಶೋಭರಾಜ್ಗೆ ವಿಚ್ಛೇದನ ನೀಡಿದ ಚಂಟಾಲ್ ಸ್ವದೇಶಕ್ಕೆ ಮರಳಿದಳು. ಆನಂತರ ಆತ ಅಕ್ರಮವಾಗಿ ಕಾಶ್ಮೀರಕ್ಕೆ ಬಂದ. ಆಗ ಅಲ್ಲಿಗೆ ಪ್ರವಾಸಕ್ಕಾಗಿ ಬಂದಿದ್ದ ಕೆನಡಾದ ಮೇರಿ ಲೀಕ್ಲರ್ಕ್ ಎನ್ನುವ ಯುವತಿಯ ಪರಿಚಯ ಅವನಿಗಾಯಿತು. ಫ್ರೆಂಚ್ ಭಾಷಿಕಳಾಗಿದ್ದ ಮೇರಿಯನ್ನು ಶೋಭರಾಜ್ ಎಷ್ಟರ ಮಟ್ಟಿಗೆ ಮರುಳು ಮಾಡಿದನೆಂದರೆ ಆಕೆ ಅವನ ಕಟ್ಟಾ ಅನುಯಾಯಿಯಾಗಿ ಅವನ ಎಲ್ಲ ಚಟುವಟಿಕೆಗಳಲ್ಲಿಯೂ ಭಾಗಿಯಾಗತೊಡಗಿದಳು. ಅವರಿಬ್ಬರೂ ಪತಿ ಪತ್ನಿಯರಂತೆಯೇ ಜೀವಿಸತೊಡಗಿದರು. ಕಾಶ್ಮೀರಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರಿಗೆ ಮೋಸ ಮಾಡಿ ಸಾಕಷ್ಟು ಹಣ ಗಳಿಸಿದ ಶೋಭರಾಜ್, ನಕಲಿ ಪಾಸ್ಪೋರ್ಟನ್ನು ಬಳಸಿ ಮೇರಿ ಜತೆಗೆ ಥೈಲೆಂಡ್ನ ರಾಜಧಾನಿ ಬ್ಯಾಂಕಾಕ್ಗೆ ಹೋದ. ತನ್ನ ಹೆಸರನ್ನು ಅಲೈನ್ ಗೋತಿಯೇ ಎಂದಿಟ್ಟುಕೊಂಡು ಮುತ್ತುರತ್ನ ವ್ಯವಹಾರ ಆರಂಭಿಸಿದ.
ಬ್ಯಾಂಕಾಕ್ ನಗರಕ್ಕೆ ಹಿಪ್ಪಿಗಳು ಮತ್ತು ವಿದೇಶಿ ಪ್ರವಾಸಿಗರು ತಂಡತಂಡವಾಗಿ ಬರುತ್ತಿದ್ದುದನ್ನು ಗಮನಿಸಿದ ಶೋಭರಾಜ್, ಅಫ್ಘಾನಿಸ್ತಾನದಲ್ಲಿ ಮಾಡಿದಂತೆಯೇ ಅವರನ್ನು ದೋಚಲು ನಿರ್ಧರಿಸಿದ. ಕನಿತ್ ಹೌಸ್ ಎನ್ನುವ ಅಪಾರ್ಟ್ವೆುಂಟ್ ಸಮುಚ್ಚಯದಲ್ಲಿ ಮೂರ್ನಾಲ್ಕು ಕೋಣೆಗಳಿರುವ ಮನೆಯೊಂದನ್ನು ಬಾಡಿಗೆಗೆ ಪಡೆದ. ಆ ನಗರಕ್ಕೆ ಬರುತ್ತಿದ್ದ ಪಾಶ್ಚಿಮಾತ್ಯ ಯುವಕ ಯುವತಿಯರನ್ನು ಮೇರಿ ಮತ್ತು ಇತರ ಅನುಯಾಯಿಗಳ ಮೂಲಕ ಸಂರ್ಪಸಿ ಅವರನ್ನು ತನ್ನ ಮನೆಗೆ ಬರುವಂತೆ ಮಾಡಿದ. ತಾನು ಥೈಲೆಂಡಿನಲ್ಲಿ ಎಲ್ಲ ಸಹಾಯ ಮಾಡುವುದಾಗಿ ನಂಬಿಸಿ ಅವರ ಸ್ನೇಹ ಗಳಿಸಿ ಅವರ ವಾಸಕ್ಕಾಗಿ ತನ್ನ ಮನೆಯ ಅತಿಥಿ ಕೋಣೆಗಳನ್ನು ಪುಕ್ಕಟೆಯಾಗಿ ಕೊಡಲಾರಂಭಿಸಿದ. ಅವರಿಗೆ ನಕಲಿ ಮುತ್ತುರತ್ನಗಳನ್ನು ಮಾರಿ ಮೋಸಗೊಳಿಸುತ್ತಿದ್ದ. ತನ್ನ ಮನೆಯಲ್ಲಿ ವಾಸ ಮಾಡಲು ಬಂದ ವಿದೇಶಿಯರ ಪಾಸ್ಪೋರ್ಟುಗಳನ್ನು ಭದ್ರಪಡಿಸುವೆನೆಂದು ಹೇಳಿ ಅವನ್ನು ಪಡೆದು ಅವುಗಳಲ್ಲಿನ ವಿವರಗಳ ಮೂಲಕ ಯಾರ ಪಾಸ್ಪೋರ್ಟನ್ನು ತಾನು ಮುಂದೆ ಬಳಸಬಹುದೆಂದು ಪರಿಶೀಲಿಸಿ ಅಂತಹ ಪ್ರವಾಸಿಗಳನ್ನೇ ಗುರಿಯನ್ನಾಗಿ ಮಾಡಿಕೊಳ್ಳುತ್ತಿದ್ದ.
ಪ್ರವಾಸಿಗರು ತನ್ನ ಮನೆಯಲ್ಲಿ ಕೆಲವು ದಿನ ಕಳೆದ ನಂತರ ಶೋಭರಾಜ್ ಅವರಿಗೆ ವಾಂತಿಭೇದಿ ಬರಿಸುವ ಹಾಗೂ ದೇಹಕ್ಕೆ ಸುಸ್ತುಂಟು ಮಾಡುವಂತಹ ಕೆಲವು ಔಷಧಿಗಳನ್ನು ವೈನಿನಲ್ಲಿ ಬೆರೆಸಿ ನೀಡುತ್ತಿದ್ದ. ಇಂತಹ ಔಷಧಿಯನ್ನು ಆತನೇ ತಯಾರಿಸುತ್ತಿದ್ದುದು ವಿಶೇಷ. ಇದರ ಪರಿಣಾಮವಾಗಿ ಪ್ರವಾಸಿಗರಿಗೆ ಜ್ವರ ಬಂದಾಗ ಮೇರಿ ಮತ್ತು ಚಾರ್ಲ್ಸ್ ಶುಶ್ರೂಷೆ ಮಾಡುತ್ತಾ ವಿಶ್ವಾಸವನ್ನು ಗಳಿಸಿ ಅವರ ಎಲ್ಲ ಗುಟ್ಟುಗಳನ್ನೂ ಅರಿತು ಅವರ ಹಣ ಮತ್ತು ಆಭರಣಗಳನ್ನು ಕದಿಯುತ್ತಿದ್ದರು. (ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)