ಒಂದೇ ಕಾರಿನಲ್ಲಿ ರಶ್ಮಿಕಾ-ವಿಜಯ್​ ಪ್ರಯಾಣ: ವದಂತಿಗೆ ಅಧಿಕೃತ ಮುದ್ರೆ ಒತ್ತಿದ ಸ್ಟಾರ್​ ಜೋಡಿ?! Rashmika Mandanna

Rashmika Mandanna
Published on

Rashmika Mandanna : ರಶ್ಮಿಕಾ ಮಂದಣ್ಣ ಹೆಸರೇಳಿದರೆ ಸಾಕು ಅವರ ನಟನೆಯ ಸೂಪರ್ ಹಿಟ್​ ಸಿನಿಮಾಗಳ ಜೊತೆಗೆ ನಾಯಕ ವಿಜಯ್ ದೇವರಕೊಂಡ ಕೂಡ ನೆನಪಿಗೆ ಬರುತ್ತಾರೆ. ಏಕೆಂದರೆ, ಇಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ವಿಜಯ್​ ಆಗಲಿ ಒಮ್ಮೆಯೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ತಾವಿಬ್ಬರೂ ಪ್ರೀತಿಯಲ್ಲಿರುವ ಸಂಗತಿಯನ್ನು ಆಗಾಗ ಪರೋಕ್ಷವಾಗಿ ಸುಳಿವು ನೀಡುತ್ತಲೇ ಇರುತ್ತಾರೆ.

ಮಾಧ್ಯಮಗಳ ಗಮನಕ್ಕೆ ಬಾರದೆ ರಹಸ್ಯವಾಗಿ ವಿದೇಶಕ್ಕೂ ಭೇಟಿ ನೀಡುತ್ತಾರೆ. ವೈಯಕ್ತಿಕವಾಗಿ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಹೊರತುಪಡಿಸಿದರೆ, ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದು ತುಂಬಾನೇ ವಿರಳ. ಆದರೆ, ಕೆಲವೊಮ್ಮೆ ಯಾರೋ ತೆಗೆದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇನ್ನು ಇತ್ತೀಚೆಗೆ, ರಶ್ಮಿಕಾ ಸ್ವಲ್ಪ ಮಟ್ಟಿಗೆ ಮುಕ್ತವಾಗಿ ಮಾತನಾಡುತ್ತಿದ್ದು, ವಿಜಯ್ ಮೇಲಿನ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಒಂದು ಸಿನಿಮಾ ಸಮಾರಂಭದಲ್ಲಿ ಮಾತನಾಡುತ್ತಿದ್ದಾಗ, ರಶ್ಮಿಕಾ ಅವರು ತಾವು ಚಿತ್ರರಂಗದ ಒಬ್ಬ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿದರು. ಈ ಮಾತು ಕೇಳುತ್ತಿದ್ದಂತೆ ಎಲ್ಲರ ಕಣ್ಣು ವಿಜಯ್ ದೇವರಕೊಂಡ ಅವರ ಮೇಲೆ ಬಿತ್ತು. ಇತ್ತೀಚೆಗೆ, 'ಕುಬೇರ' ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿಯೂ ರಶ್ಮಿಕಾ, ವಿಜಯ್​ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದ ಸುಮಾ, ರಶ್ಮಿಕಾಗೆ ಕೆಲವು ರ್ಯಾಪಿಡ್​ ಪ್ರಶ್ನೆಗಳನ್ನು ಕೇಳಿದರು. ತಾವು ಹೆಸರಿಸುವ ವ್ಯಕ್ತಿಯಿಂದ ನೀವು ಯಾವ ಗುಣಗಳನ್ನು ಕಾಪಿ ಮಾಡಲು ಬಯಸುತ್ತೀರಿ ಎಂದು ಕೇಳಿದರು. ನಾಗಾರ್ಜುನ ಬಗ್ಗೆ ಕೇಳಿದಾಗ, ಅವರ ಮೋಡಿ ಮತ್ತು ಪ್ರಭಾವವನ್ನು ಕದಿಯುತ್ತೇನೆ ಎಂದರು. ಧನುಷ್ ಬಗ್ಗೆ ಕೇಳಿದಾಗ ಅವರ ನಟನೆ, ನಿರ್ದೇಶನ, ನೃತ್ಯ ಮತ್ತು ಇನ್ನೂ ಹೆಚ್ಚಿನದನ್ನು ಕಾಪಿ ಮಾಡುತ್ತೇನೆ ಎಂದರು. ಅಲ್ಲು ಅರ್ಜುನ್ ಅವರ 'ಸ್ವಾಗ್' ಅನ್ನು ಇಷ್ಟಪಡುತ್ತೇನೆಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಬಗ್ಗೆ ಕೇಳಿದಾಗ, ಒಂದು ಕ್ಷಣ ನಾಚಿ ನೀರಾದ ರಶ್ಮಿಕಾ, ಎಲ್ಲವನ್ನೂ, ನಾನು ಎಲ್ಲವನ್ನೂ ತೆಗೆದುಕೊಳ್ಳುತ್ತೇನೆ ಎಂದರು. ಈ ವೇಳೆ ಅಲ್ಲಿದ್ದ ಜನರೆಲ್ಲರು ಒಮ್ಮೆ ಜೋರಾಗಿ ಕೂಗಿದರು.

ಇದರ ಬೆನ್ನಲ್ಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ರಶ್ಮಿಕಾ ಮತ್ತು ವಿಜಯ್​ ಜೋಡಿಯಾಗಿ ಹೋಗುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗುತ್ತಿದ್ದು, ಅದನ್ನು ನೋಡಿದ ಅಭಿಮಾನಿಗಳು ಅವರಿಬ್ಬರು ತಮ್ಮ ಪ್ರೀತಿಯನ್ನು ದೃಢೀಕರಿಸುತ್ತಿದ್ದಾರೆಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಖಂಡಿತವಾಗಿ ಇಬ್ಬರು ಪ್ರೀತಿಸುತ್ತಿದ್ದು, ಶೀಘ್ರದಲ್ಲಿ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ಇನ್ನು ರಶ್ಮಿಕಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅನಿಮಲ್, ಪುಷ್ಪ 2 ಮತ್ತು ಚಾವಾ ಚಿತ್ರಗಳ ಮೂಲಕ ಪ್ಯಾನ್-ಇಂಡಿಯಾ ಲೇಡಿ ಸೂಪರ್‌ಸ್ಟಾರ್ ಆಗಿದ್ದಾರೆ. ಸದ್ಯ ಅವರ ನಟನೆಯ 'ಕುಬೇರ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದೆಡೆ, ಗರ್ಲ್‌ಫ್ರೆಂಡ್ ಚಿತ್ರ ಈಗಾಗಲೇ ಸೆಟ್‌ನಲ್ಲಿವೆ. ಮತ್ತೊಂದೆಡೆ, ವಿಜಯ್ ದೇವರಕೊಂಡ ಸರಿಯಾದ ಹಿಟ್ ಪಡೆದು ಹಲವು ವರ್ಷಗಳೇ ಕಳೆದಿವೆ. ಈಗ ಅವರು 'ಕಿಂಗ್‌ಡಮ್' ಮೇಲೆ ಗಮನ ಹರಿಸುತ್ತಿದ್ದಾರೆ. ಹಲವು ಬಾರಿ ಮುಂದೂಡಲ್ಪಟ್ಟ ಈ ಚಿತ್ರವು ಅಂತಿಮವಾಗಿ ಜುಲೈ 25 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net