

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ತಾನು ನಟಿಸಿದ ಮೊದಲ ಕನ್ನಡ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರೇಳಲು ಹಿಂದೇಟು ಹಾಕುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು. ರಶ್ಮಿಕಾರ ವರ್ತನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ, ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು.
ಇದರ ನಡುವೆ ರಶ್ಮಿಕಾರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಎಲ್ಲೆ ಕಡೆ ಅದರ ಬಗ್ಗೆಯೇ ಚರ್ಚೆಯಾಗಿತ್ತು. ಇದೀಗ ಸ್ವತಃ ರಶ್ಮಿಕಾ ಅವರೇ ಬ್ಯಾನ್ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾರೂ ಕೂಡ ನನ್ನನ್ನು ಬ್ಯಾನ್ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಶ್ಮಿಕಾ, ಪ್ರಸ್ತುತ ನನ್ನ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಮತ್ತು ನನ್ನೊಂದಿಗೆ ಸಂಪರ್ಕದಲ್ಲಿ ಇರುವವರಿಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಕಾಂತಾರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಕೆಲವರು ನನ್ನ ಮೇಲೆ ಅನಗತ್ಯವಾಗಿ ಪ್ರತಿಕ್ರಿಯಿಸಿದರು. ಆದರೆ, ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಂತಾರ ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ನಾನು ಕಾಂತಾರ ಚಿತ್ರತಂಡ ಮತ್ತು ಸಿಬ್ಬಂದಿಗೆ ಸಂದೇಶ ಕಳುಹಿಸಿದ್ದೇನೆ. ಇದನ್ನು ಸಾಬೀತುಪಡಿಸಲು ಎಲ್ಲ ಮೆಸೇಜ್ಗಳನ್ನು ನಾನು ಸಾರ್ವಜನಿಕರಿಗೆ ತೋರಿಸಲು ಸಾಧ್ಯವಿಲ್ಲ ಎಂದು ರಶ್ಮಿಕಾ ಹೇಳಿದರು.
ಕನ್ನಡ ಚಿತ್ರರಂಗಕ್ಕೆ ನಾನು ಈಗಲೂ ಗೌರವ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡ ಚಿತ್ರರಂಗದಿಂದ ನನ್ನನ್ನು ನಿಷೇಧಿಸುವ ಯಾವುದೇ ವಿಚಾರ ಇಲ್ಲ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ. ಉತ್ತಮವಾದ ಆಫರ್ ಬಂದರೆ ನಾನು ಈಗಲೂ ಕನ್ನಡ ಸಿನಿಮಾಗಳಲ್ಲಿ ನಟಿಸಲು ತಯಾರಿದ್ದೇನೆ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ರಶ್ಮಿಕಾ ಬ್ರೇಕ್ ಹಾಕಿದ್ದಾರೆ. (ಏಜೆನ್ಸೀಸ್)