

ಮುಂಬೈ: ಕಳೆದ ವರ್ಷ ಬಿಡುಗಡೆಯಾದ ‘ಸಿಂಬಾ’ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ರೋಹಿತ್ ಶೆಟ್ಟಿ ಮೊದಲ ಬಾರಿ ಒಂದಾಗಿದ್ದರು. ಇನ್ನೇನು ಬಿಡುಗಡೆಗೆ ತಯಾರಿ ನಡೆಸಿರುವ ಸೂರ್ಯವಂಶಿ ಸಿನಿಮಾದಲ್ಲಿಯೂ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕೈ ಜೋಡಿಸಿದ್ದಾರೆ. ಈಗ ಇನ್ನೊಂದು ಹೊಸ ಚಿತ್ರದಲ್ಲಿ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದು, ಶೀರ್ಷಿಕೆ ಸಹ ಘೋಷಣೆ ಆಗಿದೆ.
ಇದನ್ನೂ ಓದಿ: ಹಾಸ್ಯ ನಟ ಚಿಕ್ಕಣ್ಣನಿಗೆ ‘ಉಪಾಧ್ಯಕ್ಷ’ ಪಟ್ಟ
ಹೌದು, ಈ ಬಾರಿ ಆಕ್ಷನ್ ಅಲ್ಲ, ಪಕ್ಕಾ ಕಾಮಿಡಿ ರೂಪದ ಕಥೆಯನ್ನೇ ಈ ತಂಡ ಹೊತ್ತು ಬಂದಿದೆ. ಈಗಾಗಲೇ ಸುದ್ದಿಯಾದಂತೆ ಸಂಜೀವ್ ಕುಮಾರ್ ಅಭಿನಯದ ‘ಅಂಗೂರ್’ ಚಿತ್ರವನ್ನೇ ರೀಮೇಕ್ ಮಾಡುತ್ತಿದ್ದು, ಇದಕ್ಕೆ ಸರ್ಕಸ್ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ಗೆ ನಾಯಕಿಯರಾಗಿ ಜಾಕ್ವೆಲೀನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ನಟಿಸುತ್ತಿದ್ದಾರೆ.
‘ಅಂಗೂರ್’ ಬಾಲಿವುಡ್ನ ಕ್ಲಾಸಿಕ್ ಚಿತ್ರ. ಶೇಕ್ಸ್ಪಿಯರ್ನ ‘ಕಾಮಿಡಿ ಆಫ್ ಎರರ್ಸ್’ ನಾಟಕವನ್ನು ಆಧರಿಸಿ ಗುಲ್ಜಾರ್ ನಿರ್ದೇಶನ ಮಾಡಿದ್ದರು. ಇನ್ನು ಸಂಜೀವ್ ಕುಮಾರ್ ಮತ್ತು ದೇವನ್ ವರ್ಮಾ ಈ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅದೇ ನಾಟಕವನ್ನಾಧರಿಸಿ, ಕನ್ನಡದಲ್ಲಿ ರಮೇಶ್ ಅರವಿಂದ್ ಅಭಿನಯದಲ್ಲಿ ‘ಉಲ್ಟಾ ಪಲ್ಟಾ’ ಚಿತ್ರ ನಿರ್ಮಾಣವಾಗಿತ್ತು. ಈಗ ಅದೇ ‘ಅಂಗೂರ್’ ಚಿತ್ರವು ಬಾಲಿವುಡ್ನಲ್ಲಿ ಇನ್ನೊಮ್ಮೆ ರೀಮೇಕ್ ಆಗುವುದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ತ್ರಿಮೂರ್ತಿ ಸನ್ನಿಧಿಯಲ್ಲಿ ‘ವಿಧಿಬರಹ’ ಆರಂಭ
ರೋಹಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ಸಿಂಬಾ’, ‘ಸೂರ್ಯವಂಶಿ’ ನಂತರ ಮುಂದೇನು ಎಂದು ಅವರು ಯೋಚಿಸುತ್ತಿದ್ದಾಗ, ‘ಅಂಗೂರ್’ ಚಿತ್ರವನ್ನು ರೀಮೇಕ್ ಮಾಡುವ ಯೋಚನೆ ಹೊಳೆಯಿತಂತೆ. ಸದ್ಯಕ್ಕೆ ಕೆಲಸಗಳು ಪ್ರಾರಂಭವಾಗಿದ್ದು, ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯನ್ನೂ ರೋಹಿತ್ ಶೆಟ್ಟಿ ಹೊತ್ತಿದ್ದಾರೆ.