ಭಯದಲ್ಲೇ ಬಣ್ಣದ ಬದುಕು

Serial
Published on

ಎರಡೂವರೆ ತಿಂಗಳ ನಂತರ ಕಿರುತೆರೆ ಶೂಟಿಂಗ್ ಶುರುವಾಗಿದೆ. ಇಷ್ಟು ದಿನ ಮನೆಯಲ್ಲಿದ್ದ ನಟಿಯರೀಗ ಸೆಟ್​ಗೆ ಮತ್ತೆ ಹಾಜರಿಹಾಕಿದ್ದಾರೆ. ಒಂದಷ್ಟು ಆತಂಕ, ಭಯದ ನಡುವೆಯೇ ಮುಖಕ್ಕೆ ಮತ್ತೆ ಬಣ್ಣ ಹಚ್ಚಿಕೊಂಡಿದ್ದಾರೆ. ಹಾಗಾದರೆ, ಕರೊನಾ ನಡುವೆಯೇ ಸೆಟ್​ನಲ್ಲಿ ಏನೆಲ್ಲ ನಡೆಯುತ್ತಿದೆ? ಮುನ್ನೆಚ್ಚರಿಕಾ ಕ್ರಮಗಳು ಹೇಗಿವೆ? ಮೊದಲಿನ ಶೂಟಿಂಗ್ ಮತ್ತು ಸದ್ಯದ ಚಿತ್ರೀಕರಣದ ಒಂದಷ್ಟು ಅನುಭವಗಳನ್ನು ಸೀರಿಯಲ್ ಸುಂದರಿಯರು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.

| ಶ್ವೇತಾ ನಾಯ್ಕ್​ ಬೆಂಗಳೂರು ಸಂಸ್ಕ್ರತಿ ನೆನಪಿಸುತ್ತಿದೆ ಕರೊನಾ

‘ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ಈಗ ‘ಕನ್ನಡತಿ’ ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಗಳ ನಂತರ ಮತ್ತೆ

ಶೂಟಿಂಗ್ ಶುರು ಮಾಡಿದ್ದು, ಬೆರಳೆಣಿಕೆಯಷ್ಟು ಕಲಾವಿದರು ಸೆಟ್​ಗೆ ಹಾಜರಾಗಿದ್ದಾರೆ. ರಂಜನಿ ಈಗ ಆಹಾರದಿಂದ ಹಿಡಿದು, ಶೂಟಿಂಗ್​ನಲ್ಲಿ ನೀಡುವ ಬಟ್ಟೆ ಬಗ್ಗೆಯೂ ತುಂಬಾ ಕೇರ್​ಫುಲ್ ಆಗಿದ್ದಾರಂತೆ. ‘ಸೆಟ್​ಗೆ ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತಿದ್ದೆ. ಈಗಲೂ ಅದು ಮುಂದುವರಿದಿದೆ ಅಷ್ಟೆ. ಅಲ್ಲಿ ನೀಡಿದ ಕಾಸ್ಯ್ಟೂಮ್ಳನ್ನು ಮನೆಯೊಳಗೆ ತರುವುದಿಲ್ಲ. ಹೊರಗೇ ಇಟ್ಟು ಬರುತ್ತೇನೆ. ಮೇಕಪ್ ಕಿಟ್ ನನ್ನದೇ ಬಳಸುತ್ತೇನೆ, ಶೂಟಿಂಗ್ ಮಾಡುವಾಗ ಅಂತರ ಕಾಯ್ದುಕೊಳ್ಳುತ್ತೇವೆ’ ಎನ್ನುತ್ತಾರೆ. ‘ಕರೊನಾ ನಮ್ಮ ಸಂಸ್ಕ್ರತಿಯನ್ನು ಮರಳಿ ನೆನಪಿಸುತ್ತಿದೆ ಅಷ್ಟೆ. ಕೈ ಮುಗಿಯುವುದು, ಕೈ-ಕಾಲು ತೊಳೆದು ಮನೆಯೊಳಗೆ ಬರುವುದು, ಕೈ ತೊಳೆದೇ ಊಟ ಮಾಡುವುದು ಎಲ್ಲವನ್ನೂ ಹಿರಿಯರು ರೂಢಿಸಿಕೊಂಡಿದ್ದರು. ನಾವೆಲ್ಲ ಅದನ್ನು ಪಾಲಿಸುತ್ತಿರಲಿಲ್ಲ. ನಮ್ಮ ಸಂಸ್ಕ್ರತಿಯನ್ನು ನೆನಪಿಸಲು ಕರೊನಾ ಒಂದು ನೆಪವಾಗಿದೆ’ ಎನ್ನುತ್ತಾರೆ ರಂಜನಿ.

ಪ್ರಕೃತಿಯಿಂದ ಪಾಠ

‘ಮುಂಚೆ ಯುದ್ಧಕ್ಕೆ ಶಸ್ತ್ರಾಸ್ತ್ರಗಳನ್ನು ಹಿಡಿದು ಹೊರಡುತ್ತಿದ್ದರು. ಈಗ ನಾವು ಕೆಲಸಕ್ಕೆ ಹೋಗಲು ಸ್ಯಾನಿಟೈಸರ್, ಮಾಸ್ಕ್ ಹಿಡಿದು ಯುದ್ಧಕ್ಕೆ ಹೋದಂತೆ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ’ ಎನ್ನುತ್ತಾರೆ ಮುದ್ದುಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಶ್ವಿನಿ. ಎರಡೂವರೆ ತಿಂಗಳ ಬ್ರೇಕ್ ನಂತರ ಮತ್ತೆ ಶೂಟಿಂಗ್ ಸೆಟ್​ನತ್ತ ಮುಖ ಮಾಡುತ್ತಿರುವ ಅವರು ಮುಂಚಿಗಿಂತ ಹೆಚ್ಚು ಜಾಗೃತರಾಗಿದ್ದಾರಂತೆ. ‘ಸೆಟ್​ನಲ್ಲಿ ಏನೇ ಮುಂಜಾಗ್ರತೆ ವಹಿಸಿದ್ದರೂ ಒಬ್ಬ ನಟಿಯಾಗಿ ನಾವೆಷ್ಟು ಜಾಗೃತರಾಗಿರುತ್ತೇವೆ ಎನ್ನುವುದು ಮುಖ್ಯ. ನಮ್ಮ ಅಗತ್ಯ ವಸ್ತುಗಳನ್ನು ಆದಷ್ಟು ಯಾರೊಂದಿಗೂ ಶೇರ್ ಮಾಡದೆ, ಮೇಕಪ್, ಡ್ರೆಸ್, ಆಹಾರ ಎಲ್ಲವನ್ನೂ ಮನೆಯಿಂದಲೇ ತೆಗೆದುಕೊಂಡು ಹೋಗುವ ಮೂಲಕ ಕರೊನಾದಿಂದ ದೂರವಿರಬಹುದು’ ಎನ್ನುತ್ತಾರೆ ಅಶ್ವಿನಿ. ‘ಆನ್​ಸ್ಕ್ರೀನ್​ನಲ್ಲಿ ಇರುವುದರಿಂದ ಕ್ಯಾಮರಾ ಮುಂದೆ ಮಾಸ್ಕ್ ಹಾಕಿಕೊಂಡು ನಿಲ್ಲೋಕೆ ಆಗಲ್ಲ. ಹಾಕಿದ್ರೂ ಎಲ್ಲ ಮೇಕಪ್ ಮಾಸ್ಕ್​ನಲ್ಲಿರತ್ತೆ. ಇದರ ಹೊರತಾಗಿ ಏನು ಮುಂಜಾಗ್ರತೆ ತೆಗೆದುಕೊಳ್ಳಬಹುದೋ ಅದೆಲ್ಲವನ್ನೂ ತಪ್ಪದೆ ಮಾಡುತ್ತಿದ್ದೇನೆ. ಮೊದಲಿನಿಂದ ನನ್ನ ಮೇಕಪ್ ನಾನೇ ಮಾಡಿಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ’ ಎನ್ನುತ್ತಾರೆ ಅಶ್ವಿನಿ.

ಜೀವದೊಂದಿಗೆ ಜೀವನವೂ ಮುಖ್ಯ

‘ನಾಗಿಣಿ 2’ ಧಾರಾವಾಹಿಯ ನಾಗಿಣಿ ಪಾತ್ರಧಾರಿ ನಮ್ರತಾ ಗೌಡ ಎರಡೂವರೆ ತಿಂಗಳ ನಂತರ ಶೂಟಿಂಗ್ ಸೆಟ್​ಗೆ ಮರಳಿದ್ದಾರೆ. ಸದ್ಯಕ್ಕೆ ತಮ್ಮದೇ ಕಾರಿನಲ್ಲಿ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದಾರೆ. ಮನೆಯೂಟವನ್ನೇ ಮಾಡುವ ಇವರು ಕಾಫಿ, ಟೀ ಬಿಟ್ಟು ಕಷಾಯ ಕುಡಿಯೋದನ್ನು ರೂಢಿಸಿಕೊಂಡಿದ್ದಾರೆ. ‘ನಮ್ಮ ಸ್ವಚ್ಛತೆಯೊಂದಿಗೆ ಸುತ್ತಮುತ್ತಲಿನ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕು’ ಎನ್ನುವ ನಮ್ರತಾ ಪ್ರತಿಬಾರಿ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಾರಂತೆ. ಅನಗತ್ಯವಾಗಿ ಎಲ್ಲೂ ಕೂರುವುದಿಲ್ಲ. ಶೂಟಿಂಗ್ ಮುಗಿಸಿ ಸೀದಾ ಮನೆಗೆ ಬಂದು ಫ್ರೆಶ್ ಆದ ನಂತರವೇ ಉಳಿದ ಕೆಲಸ ಮಾಡುವುದು. ‘ಕರೊನಾ ಅನ್ನುವ ಒಂದು ಸಣ್ಣ ವೈರಸ್ ನಮಗೆ ಎಷ್ಟು ಪಾಠ ಕಲಿಸಿದೆ. ಈ ಲಾಕ್​ಡೌನ್ ಸಮಯ ಕುಟುಂಬದೊಂದಿಗಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಕರೊನಾ ಹೋಗುತ್ತದೆ ಎಂದು ಕೂರುವುದಕ್ಕಿಂತ ಅದರೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಹೊರಗಿನ ಸ್ವಚ್ಛತೆಗಷ್ಟೇ ಗಮನ ಹರಿಸದೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಸೇವಿಸಬೇಕು. ಗ್ಲೌಸ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಡುವೆಯೂ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಟಿಪ್ಸ್ ನೀಡುತ್ತಾರೆ. ‘ಜೀವದೊಂದಿಗೆ ಜೀವನವೂ ಮುಖ್ಯ, ಅದನ್ನು ಹೇಗೆ ನಿಬಾಯಿಸುತ್ತೇವೆ ಎನ್ನು ವುದು ನಮಗೆ ಬಿಟ್ಟಿದ್ದು, ಎಷ್ಟು ದಿನ ಅಂತ ಮನೆಯಲ್ಲೇ ಕೂರಲು ಸಾಧ್ಯ. ಕೆಲಸ ಮಾಡಲೇ ಬೇಕು. ಈಗ ಹೊಸ ಭರವಸೆಯೊಂದಿಗೆ ಮತ್ತೆ ಶೂಟಿಂಗ್ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಇವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net