

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಅಜ್ಞಾತವಾಸಿ
ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ
ನಿರ್ಮಾಣ: ಹೇಮಂತ್ ಎಂ. ರಾವ್
ತಾರಾಗಣ: ರಂಗಾಯಣ ರು, ಸಿದ್ದು ಮೂಲಿಮನಿ, ಪಾವನಾ ಗೌಡ, ರವಿಶಂಕರ್, ಶರತ್ ಲೋಹಿತಾಶ್ವ, ಪಾವನಾ ಗೌಡ, ಯಮುನಾ ಶ್ರೀನಿಧಿ ಮತ್ತಿತರರು
ಕೆಲವು ಸತ್ಯಗಳು ನಮ್ಮೊಳಗೇ ಹುದುಗಿ ಹೋಗಿರುತ್ತವೆ. ಅವು ನಮ್ಮನ್ನು ಬಿಟ್ಟರೆ ಇನ್ಯಾರಿಗೂ ತಿಳಿದಿರುವುದಿಲ್ಲ. ಒಳ್ಳೆಯ ವಿಷಯವಾಗಿದ್ದರೆ ಅದರ ನೆನಪು ಮಧುರ. ಆದರೆ, ಕೆಟ್ಟದ್ದಾಗಿದ್ದರೆ ಅದು ಪಾಪಪ್ರಜ್ಞೆಯ "ಪಾಶಾಂಬರ'! ನಮ್ಮ ಕೊನೆಯವರೆಗೂ ಕಾಡಿ, ಕಾಡಿ ಸುಡುತ್ತಲೇ ಇರುತ್ತದೆ. ಆ ಪಾಪಪ್ರಜ್ಞೆಯು ಸಾಯುವವರೆಗೂ ಕೊಲ್ಲುತ್ತಲೇ ಇರುತ್ತದೆ...
ಹೀಗೆ ಹೇಳಲು ಸರಳ ಅನ್ನಿಸಬಹುದು. ಆದರೆ, ಇದನ್ನೇ ಒಂದು ಸಿನಿಮಾ ರೂಪದಲ್ಲಿ ತೆರೆಯ ಮೇಲೆ ತರುವುದು ಕಠಿಣ ಸವಾಲೇ ಸರಿ. ಅಂತಹ ಒಂದು ಸಾಹಸಕ್ಕೆ ಕೈಹಾಕಿದ್ದಾರೆ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ. ಅವರಿಗೆ ನಿರ್ಮಾಪಕನಾಗಿ ಹೇಮಂತ್ ಎಂ. ರಾವ್ ಜೊತೆಯಾಗಿದ್ದಾರೆ. ಅದು ಮಲೆನಾಡಿದ ನಾಲ್ಕೇರಿ. 1972ರಲ್ಲಿ ಒಂದು ಉಪಠಾಣೆ ನಿರ್ಮಿಸಿರುತ್ತಾರೆ. ಅದರಲ್ಲಿ ಮೂವರು ಸಿಬ್ಬಂದಿ. 1997ರಲ್ಲಿ ಮೊದಲ ಬಾರಿಗೆ ಆ ಊರಿಗೆ ಕಂಪ್ಯೂಟರ್ ಬರುತ್ತದೆ. ಅದೇ ವರ್ಷ ಆ ಊರಿನ ಶ್ರೀಮಂತ ವ್ಯಕ್ತಿ ಶ್ರೀನಿವಾಸಯ್ಯ (ಶರತ್) ಸಾವಿಗೀಡಾಗುತ್ತಾನೆ. ಅಲ್ಲಿಗೆ ಬರುವ ಇನ್ಸ್ಪೆಕ್ಟರ್ (ರು) ಇದು ಆಕಸ್ಮಿಕವಲ್ಲ, ಕೊಲೆ ಅಂತ ಹೇಳುತ್ತಾನೆ. 25 ವರ್ಷಗಳಿಂದ ತೋಟದ ಮೇಲೆ ಆನೆ ದಾಳಿ ಮಾಡಿದ ದೂರುಗಳನ್ನು ಬಿಟ್ಟರೆ ಬೇರೆ ರೀತಿಯ ಪ್ರಕರಣಗಳಿಲ್ಲದ ಊರಿನಲ್ಲಿ ಕಂಪ್ಯೂಟರ್ ಬಂದ ಕೆಲವೇ ದಿನಗಳಲ್ಲಿ ಕೊಲೆ ಅಂದರೆ!? ಪ್ರಕರಣದ ಬೆನ್ನುಹತ್ತುವ ಇನ್ಸ್ಪೆಕ್ಟರ್ ಅದನ್ನು ಹೇಗೆ ಭೇಧಿಸುತ್ತಾನೆ ಎಂಬುದರ ಸುತ್ತ "ಅಜ್ಞಾತವಾಸಿ' ಸಾಗುತ್ತದೆ.
ನವರಸಗಳನ್ನೂ ಮೀರಿದ ಭಾವನೆಗಳನ್ನು ತೋರ್ಪಡಿಸುವುದು ಕಷ್ಟಸಾಧ್ಯ. ಆದರೆ, "ಅಜ್ಞಾತವಾಸ'ದಲ್ಲಿ ಆಳದಲ್ಲಿ ಹುದುಗಿದ ಭಾವನೆಗಳನ್ನು ಕೆದಕಿ ತೆಗೆಯುವ ಪ್ರಯತ್ನ ಮಾಡಿದ್ದಾರೆ ಜನಾರ್ಧನ್ ಚಿಕ್ಕಣ್ಣ. ನಿಧಾನವಾಗಿ ಪ್ರಾರಂಭವಾದರೂ ಕಥೆ ಸಾಗಿದಂತೆ ಗಂಭೀರವಾಗುತ್ತಾ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವ ಚಿತ್ರವಿದು. "ಶಾಖಾಹಾರಿ', "ಮೂರನೇ ಕೃಷ್ಣಪ್ಪ' ಚಿತ್ರಗಳ ಮೂಲಕ ಕಾಮಿಡಿ ಜಾನರ್ನಿಂದ ಹೊರಬಂದಿರುವ ರಂಗಾಯಣ ರು ಅವರ ಅಪ್ಡೇಟೆಡ್ ವರ್ಷನ್ಅನ್ನು "ಅಜ್ಞಾತವಾಸಿ'ಯಲ್ಲಿ ಕಾಣಬಹುದು. 1990ರ ನಾಚಿಕೆ ಸ್ವಭಾವದ ಹುಡುಗ, ಆತನ ಹಿಂಜರಿಕೆ, ಭಂಡ ಧೈರ್ಯ... ಹೀಗೆ ರೋಹಿತ್ ಪಾತ್ರದಲ್ಲಿ ಭಿನ್ನ, ವಿಭಿನ್ನ ಭಾವಗಳ ಮೂಲಕ ಗಮನ ಸೆಳೆಯುತ್ತಾರೆ ಸಿದ್ದು ಮೂಲಿಮನಿ. ಪ್ರೀತಿ ಪಡೆಯಲು ಏನು ಬೇಕಾದರೂ ಮಾಡುವ ಪಂಕಜಳಾಗಿ ಪಾವನಾ, ಕಾನ್ಸ್ಟೆಬಲ್ ಅನಂತು ಪಾತ್ರದಲ್ಲಿ ರವಿಶಂಕರ್, ಅಮ್ಮಾಚಿಯಾಗಿ ಯಮುನಾ ಶ್ರೀನಿಧಿ ನೈಜ ಅಭಿನಯದ ಮೂಲಕ ಇಷ್ಟವಾಗುತ್ತಾರೆ. 1967, 1972 ಹಾಗೂ 1997 ಹೀಗೆ ಮೂರು ಕಾಲಟ್ಟಗಳಿಗೆ ಹೊಂದುವಂತೆ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ವಿಭಿನ್ನತೆ ಮೆರೆದಿದ್ದಾರೆ. ಅದಕ್ಕೆ ತಕ್ಕ ಹಿನ್ನೆಲೆ ಸಂಗೀತದ ಮೂಲಕ ಚರಣರಾಜ್ ಕಥೆಯನ್ನು ಮತ್ತಷ್ಟು ಆಪ್ತವಾಗಿಸುತ್ತಾರೆ. ಒಟಿಟಿಯಲ್ಲಿ ಪರಭಾಷಾ ಸಿನಿಮಾ ನೋಡಿ "ವಾವ್' ಕನ್ನಡದಲ್ಲೇಕೆ ಇಂತಹ ಸಿನಿಮಾಗಳು ಬರುತ್ತಿಲ್ಲ ಎನ್ನುವವರು, ಹಾಗೆ ಹೇಳುವ ಮುನ್ನ "ಅಜ್ಞಾತವಾಸಿ'ಯನ್ನೊಮ್ಮೆ ನೋಡಿದರೆ ಉತ್ತಮ!