

ಬೆಂಗಳೂರು: ‘ರಂಗಸಮುದ್ರ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಇತ್ತೀಚೆಗೆ ಮುಗಿದಿದ್ದು, ಈ ಚಿತ್ರದಲ್ಲಿ ಸ್ಟಾರ್ನಟರೊಬ್ಬರು ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆ ಸ್ಟಾರ್ನಟ ಯಾರು ಎಂಬುದನ್ನು ಚಿತ್ರತಂಡ ಗೌಪ್ಯವಾಗಿ ಇಟ್ಟಿದೆ.
ಚಿತ್ರದ ಪ್ರಮುಖ ದೃಶ್ಯದ ಚಿತ್ರೀಕರಣ ಕಳೆದ ಅಕ್ಟೋಬರ್ನಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ಪುನೀತ್ ರಾಜಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ, ಅವರ ನಿಧನದಿಂದಾಗಿ, ಇದೀಗ ಇನ್ನೊಬ್ಬರು ಸ್ಟಾರ್ ನಟರು ಆ ದೃಶ್ಯದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಈ ವಿವರಗಳನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ.
'ರಂಗಸಮುದ್ರ' ಚಿತ್ರಕ್ಕಾಗಿ ಶೇ.85ರಷ್ಟು ಚಿತ್ರೀಕರಣ ರಾಜ್ಯದ ವಿವಿದೆಡೆಗಳಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಇತ್ತೀಚೆಗೆ ಚಿತ್ರದ ಕೆಲವು ಪ್ರಮುಖ ಸನ್ನಿವೇಶಗಳನ್ನು ಗಿರಿ ಅವರ ಛಾಯಾಗ್ರಹಣದಲ್ಲಿ ನಿರ್ದೇಶಕ ರಾಜಕುಮಾರ್ ಅಸ್ಕಿ ಚಿತ್ರೀಕರಿಸಿಕೊಂಡಿದ್ದಾರೆ.
ಚಿತ್ರಕ್ಕೆ ದೇಸೀ ಮೋಹನ್ ಸಂಗೀತ ನೀಡಿದ್ದಾರೆ. ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ರಚಿಸಿದ್ದಾರೆ. ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ಎಂ.ಎಂ. ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ.
ರಂಗಾಯಣ ರಘು, ಸಂಪತ್ ರಾಜ್, ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು ಮುಂತಾದವರು ನಟಿಸಿರುವ 'ರಂಗಸಮುದ್ರ' ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಹೊಯ್ಸಳ ಕ್ರಿಯೇಷನ್ಸ್ನಡಿ ಕೆ ಆರ್ ಹೊಯ್ಸಳ ನಿರ್ಮಿಸುತ್ತಿದ್ದಾರೆ.