ಗಾಳಿಪಟವಾದ ಗಣಿ; 8 ಕೆಜಿ ತೂಕ ಇಳಿಸಿಕೊಂಡ ಗೋಲ್ಡನ್ ಸ್ಟಾರ್

Ganesh
Published on

ಬೆಂಗಳೂರು: ಪಾತ್ರಕ್ಕಾಗಿ ಕಲಾವಿದರು ದಪ್ಪ-ಸಣ್ಣ ಆಗುವುದು ಸಹಜ. ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಮತ್ತು ಇಳಿಸಿಕೊಳ್ಳುವುದಕ್ಕೆ ಏನೇನೋ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಗಣೇಶ್ ಸಹ ‘ಗಾಳಿಪಟ 2’ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು, ಇಳಿಸಿಕೊಂಡಿದ್ದಾರೆ..

2008ರಲ್ಲಿ ಬಿಡುಗಡೆಯಾದ ‘ಗಾಳಿಪಟ’ ನೆನಪಿರಬಹುದು. ಈ ಚಿತ್ರದಲ್ಲಿ ಗಣೇಶ್ ಗುಂಡಗಿದ್ದರು. ಸದಾ ಏನಾದರೊಂದು ತಿನ್ನುತ್ತಾ ಇರುವ ತಿಂಡಿಪೋತನಾಗಿ ಕಾಣಿಸಿಕೊಂಡಿದ್ದರು. ‘ಗಾಳಿಪಟ’ದಲ್ಲಿ ಹಾಗಿರುವಾಗ, ‘ಗಾಳಿಪಟ 2’ ಚಿತ್ರದಲ್ಲೂ ಅದು ಮುಂದುವರೆಯಬೇಕಲ್ಲವೇ? ಅದೇ ಕಾರಣಕ್ಕೆ ಅವರು ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ.

‘ಸುಮಾರು 8 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ಇಳಿಸಿಕೊಂಡೆ. ಕರೋನಾ ಲಾಕ್​ಡೌನ್ ಸಮಯದಲ್ಲಿ ಶೆಡ್ಯುಲ್​ಗಳ ನಡುವೆ ಬ್ರೇಕ್ ಇದ್ದ ಕಾರಣ ಚಿತ್ರೀಕರಣಕ್ಕೂ ಸಮಸ್ಯೆ ಆಗಲಿಲ್ಲ. ಮೊದಲ ಚಿತ್ರದಲ್ಲಿ ತಿಂಡಿಪೋತನ ರೀತಿಯ ಪಾತ್ರವಿತ್ತು. ಅದೇ ರೀತಿ ಇಲ್ಲೂ ಕಾಣಿಸಿಕೊಳ್ಳಬೇಕು ನಂತರ ಹೊಸ ಲುಕ್​ಗೆ ಬರಬೇಕು ಅಂತ ಅನ್ನಿಸಿದ ಕಾರಣ ಹೀಗೆ ಮಾಡಿದೆ. ಆ ಬದಲಾವಣೆಯನ್ನು ನನ್ನ ಪಾತ್ರ ಪರಿಚಯದ ಟೀಸರ್​ನಲ್ಲೂ ನೋಡಬಹುದು’ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ ಗಣೇಶ್.

‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶರ್ವಿುಳಾ ಮಾಂಡ್ರೆ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಜತೆಗೆ ಅನಂತ್ ನಾಗ್, ರಂಗಾಯಣ ರಘು, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಇದೇ ಆಗಸ್ಟ್ 12ರಂದು ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net