ಬಾಲಿವುಡ್​ನಲ್ಲಿ ಇನ್ನೊಂದು 'ಪ್ರೇಮ್​ ಕಹಾನಿ' ...

Ranveer - Aalia Bhatt - Final
Published on

ಮುಂಬೈ:'ಪ್ರೇಮ್​ ಕಹಾನಿ' ಎನ್ನುವುದು ಚಿತ್ರರಂಗದ ಫೇವರೇಟ್​ ಶೀರ್ಷಿಕೆ ಎಂದರೆ ತಪ್ಪಿಲ್ಲ. ಹಿಂದಿಯಲ್ಲಿ ಈಗಾಗಲೇ ಎರಡು ಬಾರಿ ಅದೇ ಹೆಸರಿನ ಚಿತ್ರಗಳು ಬಂದಿರುವುದರ ಜತೆಗೆ ಕನ್ನಡದಲ್ಲೂ ಅಜಯ್​ ರಾವ್​ ಅಭಿನಯದಲ್ಲಿ 'ಪ್ರೇಮ್​ ಕಹಾನಿ' ಎಂಬ ಚಿತ್ರವೊಂದು ಬಂದಿತ್ತು. ಈಗ್ಯಾಕೆ ಈ ವಿಷಯವೆಂದರೆ, ಬಾಲಿವುಡ್​ನಲ್ಲಿ ಅದೇ ಹೆಸರಿನ ಇನ್ನೊಂದು ಚಿತ್ರ ಸೆಟ್ಟೇರುತ್ತಿದೆ.

ಹೌದು, ರಣವೀರ್ ಸಿಂಗ್​ ಮತ್ತು ಆಲಿಯಾ ಭಟ್​ ಅಭಿನಯದಲ್ಲಿ ಕರಣ್​ ಜೋಹರ್​ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದು, ಆ ಚಿತ್ರಕ್ಕೆ ಇದೀಗ 'ಪ್ರೇಮ್​ ಕಹಾನಿ' ಎಂಬ ಹೆಸರನ್ನು ಇಡಲಾಗಿದೆ. ಈಗಾಗಲೇ ಲಾಕ್​ಡೌನ್​ ಸಮಯದಲ್ಲಿ ಕರಣ್​, ಚಿತ್ರದ ಸ್ಕ್ರಿಪ್ಟ್​ ಕೆಲಸಗಳನ್ನು ಮುಗಿಸಿದ್ದಾರಂತೆ. ಇನ್ನು, ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಮೊದಲಿಗೆ ಚಿತ್ರತಂಡದವರಿಗೆ ಲಸಿಕೆ ಹಾಕಿಸಿ, ತಕ್ಷಣವೇ ಅವರು ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್​ನಲ್ಲಿದೆ.

ಕರಣ್​ ಚಿತ್ರವೊಂದನ್ನು ನಿರ್ದೇಶಿಸಿ ನಾಲ್ಕು ವರ್ಷಗಳೇ ಆಗಿದ್ದವು. 'ಏ ದಿಲ್​ ಹೇ ಮುಷ್ಕಿಲ್​' ಎಂಬ ಚಿತ್ರವನ್ನು ನಿರ್ದೇಶಿಸಿದ ನಂತರ, ಅವರು ನಿರ್ದೇಶನಕ್ಕಿಂತ ನಿರ್ಮಾಣದಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಆಗಾಗ ನಿರ್ದೇಶನಕ್ಕೆ ವಾಪಸ್ಸಾಗುವ ಬಗ್ಗೆ ಹೇಳುತ್ತಲೇ ಇದ್ದ ಅವರು, ಇದೀಗ 'ಪ್ರೇಮ್​ ಕಹಾನಿ' ಮೂಲಕ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ ಎನ್ನುವುದು ವಿಶೇಷ.

ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಇದಕ್ಕೂ ಮುನ್ನ 'ಗಲ್ಲಿ ಬಾಯ್​' ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಆ ನಂತರ ಅವರು ಕರಣ್​ ಜೋಹರ್​ ನಿರ್ಮಾಣದ 'ತಖ್ತ್​' ಚಿತ್ರದಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತು. ಚಿತ್ರ ಪ್ರಾರಂಭವಾದರೂ, ಬಜೆಟ್​ ಹೆಚ್ಚಾಯಿತು ಎಂಬ ಕಾರಣಕ್ಕೆ ಆ ಚಿತ್ರವನ್ನು ನಿಲ್ಲಿಸಿ, 'ಪ್ರೇಮ್​ ಕಹಾನಿ' ಶುರು ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net