ಚಾರ್ಲಿಗೆ ರಾಣಾ ಸಾಥ್; ತೆಲುಗು ಅವತರಣಿಕೆ ಅರ್ಪಣೆ

Rana
Published on

ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಾಣದ ಮತ್ತು ಅಭಿನಯದ ‘777 ಚಾರ್ಲಿ’ ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕಲರ್ಸ್ ಕನ್ನಡ ಮತ್ತು ವೂಟ್ ಬರೋಬ್ಬರಿ 21 ಕೋಟಿ ರೂ.ಗೆ ಖರೀದಿಸಿದೆ ಎಂದು ಕಳೆದ ವಾರವಷ್ಟೇ ದೊಡ್ಡ ಸುದ್ದಿಯಾಗಿತ್ತು. ಈಗ ಚಿತ್ರತಂಡದಿಂದ ಇನ್ನೊಂದು ಸುದ್ದಿ ಬಂದಿದ್ದು, ತೆಲುಗು ಅವತರಣಿಕೆಯನ್ನು ರಾಣಾ ದಗ್ಗುಬಾಟಿ ತಮ್ಮ ಸುರೇಶ್ ಪ್ರೊಡಕ್ಷನ್ಸ್ ಮೂಲಕ ಅರ್ಪಿಸುತ್ತಿದ್ದಾರೆ.

‘777 ಚಾರ್ಲಿ’ ಚಿತ್ರವು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಪೈಕಿ ತಮಿಳು ಅವತರಣಿಕೆಯನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅರ್ಪಿಸಿದರೆ, ಮಲಯಾಳಂ ಅವತರಣಿಕೆಯನ್ನು ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ಅರ್ಪಿಸುತ್ತಿದ್ದಾರೆ. ಇನ್ನು, ತೆಲುಗು ಚಿತ್ರವನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಸುರೇಶ್ ಪ್ರೊಡಕ್ಷನ್ಸ್ ಮೂಲಕ ನಟ ರಾಣಾ ದಗ್ಗುಬಾಟಿ ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಕ್ಷಿತ್, ರಾಣಾ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ. ‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್ ಮುಂತಾದವರು ನಟಿಸಿದ್ದು, ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರ ಜೂನ್ 10ಕ್ಕೆ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net